ನವದೆಹಲಿ: ಗೋವುಗಳನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಸ್ಪಷ್ಟನೆ ನೀಡಿದೆ.
ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಖಾತೆ ರಾಜ್ಯ ಸಚಿವ ಎಸ್ ಪಿ ಸಿಂಗ್ ಬಾಘೇಲ್ ಮಂಗಳವಾರ ಹಿರಿಯ ಬಿಜೆಪಿ ನಾಯಕ ಮತ್ತು ಉತ್ತರಾಖಂಡ್ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದರು.
“ಇಲ್ಲ ಸರ್. ಸಂವಿಧಾನದ 246(3) ನೇ ವಿಧಿಯ ಪ್ರಕಾರ, ಕೇಂದ್ರ ಮತ್ತು ರಾಜ್ಯಗಳ ನಡುವಿನ ಶಾಸಕಾಂಗ ಅಧಿಕಾರಗಳ ವಿತರಣೆಯ ಅಡಿಯಲ್ಲಿ, ಪ್ರಾಣಿಗಳ ಸಂರಕ್ಷಣೆಯು ರಾಜ್ಯ ಶಾಸಕಾಂಗ ಶಾಸನ ಮಾಡಲು ವಿಶೇಷ ಅಧಿಕಾರ ಹೊಂದಿರುವ ವಿಷಯವಾಗಿದೆ ಎಂದು ಭಾಘೇಲ್ ಹೇಳಿದರು.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಸುಗಳ ಉತ್ತೇಜನ, ರಕ್ಷಣೆ ಮತ್ತು ಪಾಲನೆಗಾಗಿ ಕೈಗೊಂಡ ಉಪಕ್ರಮಗಳನ್ನು ಬೆಂಬಲಿಸಲು ಮತ್ತು ಬಲಪಡಿಸಲು ಕೇಂದ್ರ ಸರ್ಕಾರ ಡಿಸೆಂಬರ್ 2014 ರಿಂದ ರಾಷ್ಟ್ರೀಯ ಗೋಕುಲ್ ಮಿಷನ್ ಅನ್ನು ಜಾರಿಗೊಳಿಸಿದೆ ಎಂದು ಸಚಿವರು ತಿಳಿಸಿದರು.
ಹಾಲು ಉತ್ಪಾದನೆಯಲ್ಲಿ, 2024 ರಲ್ಲಿ ದೇಶದ ಒಟ್ಟು ಹಾಲು ಉತ್ಪಾದನೆಯಾದ 239.30 ಮಿಲಿಯನ್ ಟನ್‌ಗಳಲ್ಲಿ ಹಸುವಿನ ಹಾಲಿನ ಕೊಡುಗೆ ಶೇಕಡಾ 53.12 ರಷ್ಟು ಇದೆ ಮತ್ತು ಎಮ್ಮೆ ಹಾಲು ಶೇಕಡಾ 43.62 ರಷ್ಟಿದೆ ಎಂದು ಬಘೇಲ್ ಸದನಕ್ಕೆ ತಿಳಿಸಿದರು.