Menu

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ: ಡಿಕೆ ಶಿವಕುಮಾರ್

“ನಾವು ಅವರ (ಧರ್ಮಸ್ಥಳ) ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ” ಎಂದು ಡಿಸಿಎಂ ಡಿಕೆ ಶಿವಕುಮಾರ್  ಹೇಳಿದರು.

ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ  ಪ್ರತಿಕ್ರಿಯೆ ನೀಡಿದರು. ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿ ದೂರುದಾರನ ಬಂಧನವಾಗಿದೆ, ‘ಷಡ್ಯಂತ್ರ’ವಾಗಿದೆ ಎಂದು ಮೊದಲು ಗಮನ‌ ಸೆಳೆದಿದ್ದು ನೀವು ಎನ್ನುವ ಬಗ್ಗೆ ಕೇಳಿದಾಗ, “ಬಿಜೆಪಿಯವರು ಇದುವರೆಗೂ ಏನೂ ಮಾತನಾಡಿರಲಿಲ್ಲ. ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದರು. ನಾನು ‘ಷಡ್ಯಂತ್ರ’ ವಿಚಾರ ಪ್ರಸ್ತಾವನೆ ಮಾಡಿದ ನಂತರ ಮಾತನಾಡುತ್ತಿದ್ದಾರೆ” ಎಂದರು.

ಧರ್ಮಸ್ಥಳದ ಕುಟುಂಬದವರೇ ಬಂದು ಮುಖ್ಯಮಂತ್ರಿಗಳ ಬಳಿ ಮಾತನಾಡಿ, ನೀವು ಎಸ್ ಐಟಿ ರಚನೆ ಮಾಡಿರುವುದು ಒಳ್ಳೆಯ ಕೆಲಸ ಎಂದು ಹೇಳಿದ್ದಾರೆ. ತನಿಖೆ ನಡೆಯುತ್ತಿದೆ. ತಪ್ಪಿತಸ್ಥರು ಯಾರೇ ಇದ್ದರು ನಮ್ಮ‌‌ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ಮುಖ್ಯಮಂತ್ರಿಯವರು, ಗೃಹ ಸಚಿವರು ಸದನದಲ್ಲಿ ಹಾಗೂ ಸಿಎಲ್ ಪಿ ಸಭೆಯಲ್ಲೂ ತಿಳಿಸಿದ್ದಾರೆ ಎಂದರು.  ಅನನ್ಯಾ ಭಟ್ ನನ್ನ ಮಗಳೇ ಅಲ್ಲ ಎಂದು ಸುಜಾತ ಭಟ್ ಹೇಳಿಕೆ ಬಗ್ಗೆ ಕೇಳಿದಾಗ, “ಇದನ್ನು ಗೃಹಸಚಿವರು ನೋಡಿಕೊಳ್ಳುತ್ತಾರೆ”ಎಂದು ಉತ್ತರಿಸಿದರು.

ಸುರ್ಜೇವಾಲ ಅವರ ಜೊತೆಗಿನ ಸಭೆಯ ಬಗ್ಗೆ ಕೇಳಿದಾಗ, “ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತಯಾರಿ ನಡೆಸಬೇಕಲ್ಲವೇ? ಆದ ಕಾರಣ ಸಭೆ ಕರೆದು ಜವಾಬ್ದಾರಿ ಹಂಚಿಕೆ ಮಾಡುತ್ತಿದ್ದೇವೆ. ನ್ಯಾಯಾಲಯ ಚುನಾವಣೆ ನಡೆಸಿ ಎಂದ ಮೇಲೆ ಕಡೆಗಣಿಸಬಾರದಲ್ಲವೇ?” ಎಂದು ಹೇಳಿದರು.

ಬಿಹಾರಕ್ಕೆ ತೆರಳುತ್ತಿರುವ ಬಗ್ಗೆ ಕೇಳಿದಾಗ, “ಬಿಹಾರದಲ್ಲಿ ಕಾಂಗ್ರೆಸ್ ಜನಾಧಿಕಾರ ಯಾತ್ರೆ ನಡೆಯುತ್ತಿದೆ. ಅದನ್ನು ಪಕ್ಷದ‌ ಶಾಸಕರು ನೋಡಬೇಕು ಎಂದರು, ಅದಕ್ಕಾಗಿ ತೆರಳುತ್ತಿದ್ದೇವೆ. ಮುಖ್ಯಮಂತ್ರಿಗಳನ್ನೂ ಆಹ್ವಾನ ಮಾಡಿದ್ದು ಅವರೂ ಸಹ ಇನ್ನೊಂದು ದಿನ ತೆರಳುತ್ತಿದ್ದಾರೆ. ಎಷ್ಟು ಮಂದಿ ಶಾಸಕರು ತೆರಳುತ್ತಿದ್ದೀರಾ ಎಂದು ಮರುಪ್ರಶ್ನಿಸಿದಾಗ, “ಜಾಗ ಎಷ್ಟಿದೆಯೋ ಅಷ್ಟು ಮಂದಿ” ಎಂದರು.

Related Posts

Leave a Reply

Your email address will not be published. Required fields are marked *