ರೈತರ ಒಳಿತಿಗಾಗಿ ಕಾವೇರಿ ಮಾತೆಗೆ ಆರತಿ ಪೂಜೆ ನಡೆಸುವ ಕಾರ್ಯಕ್ರಮಕ್ಕೆ ರೈತರ ವಿರೋಧ ಇಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.
ಬುಧವಾರ ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾವೇರಿ ಆರತಿಗೆ ರೈತರ ವಿರೋಧವಿದೆ ಎಂದು ಕೇಳಿದಾಗ, “ರೈತರ ವಿರೋಧ ಇದೆ ಎಂದು ಯಾರು ಹೇಳಿದರು? ಪೂಜೆ ಮಾಡಲು ಯಾರಾದರೂ ವಿರೋಧ ಮಾಡುತ್ತಾರಾ? ನೀವು ವಿರೋಧ ಮಾಡಬಹುದು” ಎಂದು ತಿಳಿಸಿದರು.
“ಕೆಆರ್ ಎಸ್ ನಲ್ಲಿ ಈ ಬಾರಿ ಸಾಂಕೇತಿಕವಾಗಿ ಹಮ್ಮಿಕೊಂಡಿರುವ ಕಾವೇರಿ ಆರತಿ ಕಾರ್ಯಕ್ರಮದ ಸಿದ್ಧತೆ ಪರಿಶೀಲನೆ ಮಾಡಿದ್ದೇನೆ. ನಾವು ದೊಡ್ಡದಾಗಿ ಮಾಡಬೇಕು ಎಂದುಕೊಂಡಿದ್ದ ಜಾಗದಲ್ಲಿ ಈ ಬಾರಿ ಕಾರ್ಯಕ್ರಮ ಮಾಡುತ್ತಿಲ್ಲ” ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರ ನಿಧನಕ್ಕೆ ಸಂತಾಪ ಸೂಚಿಸಿದರು.
“ಎಸ್.ಎಲ್. ಭೈರಪ್ಪ ಅವರು ಕ್ರಾಂತಿಕಾರಿ ಸಾಹಿತಿಗಳು. ಯಾರಿಗೂ ಹೆದರದೆ ನೇರ, ನಿಷ್ಠುರವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದರು. ಈ ಹಿಂದೆ ಕನಕಪುರದಲ್ಲಿ ನಡೆದಿದ್ದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಸಾಹಿತ್ಯ ಲೋಕಕ್ಕೆ ಮಾತ್ರವಲ್ಲ ಎಲ್ಲಾ ರಂಗದ ವ್ಯಕ್ತಿಗಳಿಗೂ ಮಾರ್ಗದರ್ಶನ ನೀಡುವಂತಹ ವ್ಯಕ್ತಿತ್ವ ಇವರದ್ದಾಗಿತ್ತು. ತಮ್ಮಪಾಡಿಗೆ ಕೆಲಸ ಮಾಡುತ್ತಾ ಹೋದವರು. ಇಡೀ ಸಾಹಿತ್ಯ ಕ್ಷೇತ್ರದಲ್ಲಿ ಇವರ ಹೆಸರು ಶಾಶ್ವತವಾಗಿ ಉಳಿದುಕೊಂಡಿದೆ” ಎಂದರು.
” ಅವರ ಆತ್ಮಕ್ಕೆ ಶಾಂತಿ ದೊರಕಲಿ. ಕರ್ನಾಟಕ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ಅವರ ನಿಧನಕ್ಕೆ ಕಂಬನಿ ಮಿಡಿಯುತ್ತದೆ. ಅವರ ಕುಟುಂಬ ವರ್ಗ ಸೇರಿದಂತೆ ಅಭಿಮಾನಿಗಳಿಗೆ ದುಃಖವನ್ನು ತಡೆದುಕೊಳ್ಳುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ” ಎಂದರು.


