ವಿಜಯದಶಮಿ ಸಮೀಪಿಸುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಘೋಷಣೆ ಮಾಡುತ್ತದೆ. ಒಂದೊಮ್ಮೆ ವಿಜಯೇಂದ್ರನನ್ನು ಮುಂದುವರೆಸಿದರೆ ಬಿಜೆಪಿ 30 ಸೀಟು ಗೆಲ್ಲಲ್ಲ. ರಾಜ್ಯದಲ್ಲಿ ಬಿವೈವಿಜಯೇಂದ್ರನ ನಾಯಕತ್ವ ಯಾರೂ ಒಪ್ಪಿಕೊಂಡಿಲ್ಲ. ವಿಜಯೇಂದ್ರ ಬಿಟ್ಟು ಯಾರೇ ರಾಜ್ಯಾಧ್ಯಕ್ಷರಾದರೂ ಒಪ್ಪಿಕೊಳ್ಳುತ್ತೇನೆ. ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಹಾಗಾದರೆ ವಿಜಯೇಂದ್ರಗೆ ಅಧಿಕಾರ ನೀಡಬಾರದು. ಇಲ್ಲವಾದರೆ ಎಲ್ಲ ರಾಜಕೀಯ ನಾಯಕರ ಮಕ್ಕಳಿಗೆ ಟಿಕೆಟ್ ನೀಡಲಾಗುವುದು ಎಂದು ಬಿಜೆಪಿ ಘೋಷಣೆ ಮಾಡಲಿ ಎಂದು ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಯತ್ನಾಳ ಸವಾಲು ಹಾಕಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷನನ್ನಾಗಿ ವಿಜಯೇಂದ್ರನನ್ನೇ ಮತ್ತೇ ಆಯ್ಕೆ ಮಾಡಿದರೆ ಮರು ಕ್ಷಣವೇ ಹೊಸ ಪಕ್ಷ ಘೋಷಣೆ ಮಾಡುತ್ತೇನೆ. ವಿಜಯೇಂದ್ರನನ್ನು ಮತ್ತೇ ಅಧ್ಯಕ್ಷ ಅಂತ ಮುಂದುವರೆಸಿದರೆ ಹೊಸ ಪಕ್ಷ ಕಟ್ಟುವುದು ನಿಶ್ಚಿತ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅಯೋಗ್ಯ, ಭ್ರಷ್ಟನಿದ್ದಾನೆ ಎಂದು ಹೇಳಿದ್ದೇನೆ. ಇಷ್ಟಾದರೂ ಹೈಕಮಾಂಡ್ ಅವನೇ ಬೇಕು ಎಂದರೆ ನಾನೇನು ಮಾಡಬೇಕು. ಜನರಿಗೆ ಸದ್ಯದ ಎಲ್ಲ ಪಕ್ಷಗಳ ಮೇಲೆ ವಿಶ್ವಾಸವಿಲ್ಲ. ರಾಜಕೀಯ ಶಕ್ತಿ ಅಗತ್ಯವಿದೆ ಎಂದರು.
ದೊಡ್ಡ ಮೊತ್ತದ ಕಾಣಿಕೆ ನೀಡಿದವರ ಪರ ಸ್ವಾಮೀಜಿಗಳು ಮಾತನಾಡುತ್ತಿದ್ದಾರೆ. ಇದರಿಂದ ಹಿಂದಿನಂತೆ ತಪಸ್ಸಿನ ಶಕ್ತಿ ಸ್ವಾಮೀಜಿಗಳಲ್ಲಿ ಉಳಿದಿಲ್ಲ. ರಾಜಕಾರಣಿಗಳು ಸ್ವಾಮೀಜಿಗಳನ್ನು ಮನೆಗೆ ಕರೆದು, ಭರ್ಜರಿ ಪ್ರಸಾದ ಮಾಡಿಸಿ ಪಾದಪೂಜೆ ಮಾಡುತ್ತಾರೆ. ಲಕ್ಷಂತರ ರೂ.ಕಾಣಿಕೆ ರೂಪದಲ್ಲಿ ನೀಡಿರುತ್ತಾರೆ. ಇದರಿಂದ ಕೆಲ ಸ್ವಾಮಿಗಳು ರಾಜಕಾರಣಿಗಳ ಪರ ವಕಾಲತ್ತು ವಹಿಸಿ, ಶಾಪ ಹಾಕುತ್ತಾರೆ. ಇಂಥ ಸ್ವಾಮೀಜಿಗಳು ಹಾಕಿದ ಶಾಪದಿಂದ ಏನೂ ಆಗುವುದಿಲ್ಲ. ಈ ಹಿಂದೆ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಇಳಿಸಬಾರದು ಎಂದು ನೂರಾರು ಸ್ವಾಮೀಜಿಗಳು ಹೋರಾಟ ಮಾಡಿದ್ದರು. ಆಗ ಅವರಿಗೆಲ್ಲ ಪ್ಯಾಕೇಟ್ ನೀಡಲಾಗಿತ್ತು ಎಂದು ಯತ್ನಾಳ ಪರೋಕ್ಷವಾಗಿ ಪಂಚಪೀಠದಲ್ಲಿ ಒಂದಾದ ರಂಭಾಪುರಿ ಸ್ವಾಮೀಜಿಗಳನ್ನು ಲೇವಡಿ ಮಾಡಿದರು.
ಯತ್ನಾಳರನ್ನು ಒಪ್ಪಿಸಿ ಒಂದು ಮಾಡುತ್ತೇನೆ ಎಂಬ ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರಿಯಿಸಿ, ರಾಮುಲು ಹೇಳಿದಾಕ್ಷಣ ಒಪ್ಪಿಕೊಳ್ಳಲು ನನಗೆ ಹುಚ್ಚು ಹಿಡಿದಿಲ್ಲ. ಅದೇ ವಿಜಯೇಂದ್ರ ರಾಮುಲು ಭವಿಷ್ಯ ಹಾಳು ಮಾಡಿದರು.ನಾನು ಬಿಜೆಪಿಯಲ್ಲೇ ಇರುವೆ. ಬಿಜೆಪಿ ಬಿಟ್ಟು ನಾನು ಹೋಗಿಲ್ಲ. ಯಡಿಯೂರಪ್ಪ ತನ್ನ ಮಗ, ಮೊಮ್ಮಗನ ಭವಿಷ್ಯಕ್ಕಾಗಿ ನನ್ನನ್ನು ಹೊರಗಡೆ ಹಾಕಿದ್ದಾನೆ. ನಾವೇನು ಆತನ ಮನೆಯಲ್ಲಿ ಕಸ ಹೊಡೆದುಕೊಂಡು ಇರಬೇಕೇ ಎಂದು ಖಾರವಾಗಿ ಪ್ರಶ್ನಿಸಿದರು.
ಖಾವಿ ವೇಷ ಧರಿಸಿರುವ ಕೆಲವು ಕಳ್ಳ ಸ್ವಾಮೀಜಿಗಳು ಇಸ್ಲಾಂ ಹಾಗೂ ಲಿಂಗಾಯತ ಎರಡೂ ಒಂದೇ ಎನ್ನುತ್ತಾರೆ. ಮೊದಲು ಅಯ್ಯಪ್ಪ ಸ್ವಾಮಿ ದೇವಸ್ಥಾನ ಅಪವಿತ್ರ ಮಾಡಿದ್ದಾರೆ. ಪವಿತ್ರ ಸ್ಥಳವನ್ನು ಅಪವಿತ್ರ ಮಾಡಲು ಎಡಚರಗಳು, ಸೋ ಕಾಲ್ಡ್ ಬುದ್ಧಿಜೀವಿಗಳು, ಅಯೋಧ್ಯ ಸ್ವಾಮೀಜಿಗಳು ಷಡ್ಯಂತ್ರ ಮಾಡುತ್ತಿದ್ದಾರೆ. ವೀರಶೈವ ಲಿಂಗಾಯತರೆಲ್ಲ ಒಗ್ಗೂಡಬೇಕು ಎಂದು ದಾವಣಗೆರೆ ಸಮಾವೇಶದಲ್ಲಿ ಹೇಳಲಾಗಿದೆ. ಆದರೆ ದಾವಣಗೆರೆಯಲ್ಲಿನ ಸಂಘದ ಬೋರ್ಡ್ ಮೇಲೆಯೇ ವೀರಶೈವ ಲಿಂಗಾಯತ ಎಂದು ಬರೆದಿರಲಿಲ್ಲ. ಯಡಿಯೂರಪ್ಪ, ಶಾಮನೂರು ಶಿವಶಂಕರಪ್ಪ ಮತ್ತು ಈಶ್ವರ ಖಂಡ್ರೆ ಈ ಸಂಘಟನೆಯ ಶ್ರೀಮಂತ ತ್ರಿಮೂರ್ತಿಗಳು. ಇವರು ಒಂದೇ ಕಡೆ ಕುಳಿತು ಮಾತನಾಡುತ್ತಾರೆ. ಧರ್ಮಸ್ಥಳದ ರೀತಿಯಲ್ಲೇ ಕೆಲವರು ಕೂಡಲಸಂಗಮದಲ್ಲಿ ಮಾಡುತ್ತಿದ್ದಾರೆ. ವೈಯಕ್ತಿಕ ಜಗಳಕ್ಕೆ ದೇವಸ್ಥಾನಕ್ಕೆ ಬೀಗ ಹಾಕಿದ್ದಾರೆ. ಮುಂದಿನ 10 ವರ್ಷದಲ್ಲಿ ಬೀಗ ಹಾಕಿದವರ ಮನೆಗೆ ಬೀಗ ಬೀಳುತ್ತಿದೆ. ಜನ ಭಕ್ತಿಯಿಂದ ಮಠಕ್ಕೆ ಕೊಟ್ಟ ಹಣ ದುರ್ಬಳಕೆ ಮಾಡಿಕೊಂಡರೆ ಯಾರೂ ಉದ್ದಾರವಾಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು