Menu

ಯಾರು ಏನೇ ಮಾಡಿದರೂ ಇದು ಬೆಂಗಳೂರು ದಕ್ಷಿಣ ಜಿಲ್ಲೆ ಮಾಡ್ತೀವಿ: ಡಿಕೆ ಶಿವಕುಮಾರ್

dk shivakumar

ಬೆಂಗಳೂರು: ಈ ಪ್ರದೇಶ ಬೆಂಗಳೂರಿನ ಭಾಗ. ಈ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರದ ಬಳಿ ಕುಮಾರಸ್ವಾಮಿ ತಕರಾರು ಸಲ್ಲಿಸಿದ್ದಾರೆ. ಯಾರು ಏನೇ ಮಾಡಿದರೂ ಇದನ್ನು ಬೆಂಗಳೂರು ದಕ್ಷಿಣ ಎಂದು ಮಾಡುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಶನಿವಾರ ಕನಕಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಹಾಗೂ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.

ಪಾಪ ಕುಮಾರಸ್ವಾಮಿ ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ನಾನು ಹಾಗೂ ಇಲ್ಲಿರುವ ಕೆಲವರು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದೆವು. ಇದು ಕನಕಪುರ ಲೋಕಸಭಾ ಕ್ಷೇತ್ರ ಇತ್ತು. ನಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಇದನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಎಂದು ಮಾಡಿದೆವು. ಈಗ ಈ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಮರುನಾಮಕರಣ ಮಾಡಲು ಮುಂದಾಗಿದ್ದು, ಇದನ್ನು ಮಾಡಬಾರದು ಎಂದು ಕೇಂದ್ರ ಸರ್ಕಾರದ ಬಳಿ ಕುಮಾರಸ್ವಾಮಿ ಅರ್ಜಿ ಹಾಕಿದ್ದಾರೆ. ಅವರು ಏನಾದರೂ ಮಾಡಲಿ, ಈ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಿಯೇ ಮಾಡುತ್ತೇವೆ. ಅದಕ್ಕೆ ಏನು ಮಾಡಬೇಕೋ ಅದನ್ನು ನಾನು ಮಾಡುತ್ತೇನೆ” ಎಂದು ತಿಳಿಸಿದರು.

ಜಿಲ್ಲೆಯ ಜನ ಸ್ಮರಿಸುವಂತೆ ನಾವು ಕೆಲಸ ಮಾಡಬೇಕು

“ಇಲ್ಲಿ ಬಾಲಕೃಷ್ಣ, ಯೋಗೇಶ್ವರ್, ಇಕ್ಬಾಲ್ ಹುಸೇನ್ ಇದ್ದಾರೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 100 ಎಕರೆ ಪ್ರದೇಶದಲ್ಲಿ ಬಡವರಿಗೆ ನಿವೇಶನ ಹಂಚುವ ಕೆಲಸ ಮಾಡಬೇಕು ಎಂದು ಈ ಮೂವರು ಶಾಸಕರಿಗೆ ಹೇಳುತ್ತೇನೆ. ಸರ್ಕಾರಿ ಜಮೀನಿನಲ್ಲಿ ಅಥವಾ ಖಾಸಗಿ ಜಮೀನು ಖರೀದಿ ಮಾಡಿ ಆ ಕೆಲಸ ಮಾಡಲೇಬೇಕು. ನಮ್ಮ ಕಾಲ ಇಂತಹ ಕೆಲಸ ಆಯಿತು ಎಂದು ನಾವು ಕುಮಾರಸ್ವಾಮಿ ಅವರಿಗೆ ಹೇಳಬೇಕು.

ನಮ್ಮ ಜನ ಬೆಂಗಳೂರಿಗೆ ವಲಸೆ ಹೋಗುವುದನ್ನು ತಪ್ಪಿಸಬೇಕು ಎಂದು ಅನೇಕ ಕಾರ್ಯಕ್ರಮ ರೂಪಿಸಲಾಗಿದೆ. ಇಂದು ಬೆಳಗ್ಗೆ ಎರಡು ಕಡೆಗಳಲ್ಲಿ ಪ್ರೆಸ್ಟೀಜ್ ಹಾಗೂ ಟೊಯೋಟಾ ಸಂಸ್ಥೆಗಳಿಂದ ಶಾಲಾ ಕಟ್ಟಡ ನಿರ್ಮಿಸುತ್ತಿದ್ದೇವೆ. ನಮ್ಮ ಜಿಲ್ಲೆಯಲ್ಲಿ ರಾಜ್ಯಕ್ಕೆ ಮಾದರಿಯಾಗುವಂತೆ ಈ ತೀರ್ಮಾನ ಮಾಡಿದ್ದೇವೆ. ರಾಜ್ಯದಲ್ಲಿ ಈ ರೀತಿ 2 ಸಾವಿರ ಶಾಲೆ ನಿರ್ಮಿಸುವ ಘೋಷಣೆ ಮಾಡಿದ್ದು, ಅದಕ್ಕೆ ಹೊಸ ರೂಪ ನೀಡುತ್ತಿದ್ದೇವೆ” ಎಂದು ತಿಳಿಸಿದರು.

ಜಿಲ್ಲೆಯ ಯೋಜನೆಗಳ ಬಗ್ಗೆ ಶೀಘ್ರದಲ್ಲಿ ಸಭೆ

“ಚನ್ನಪಟ್ಟಣ, ಮಾಗಡಿ, ಕನಕಪುರ, ಹಾರೋಹಳ್ಳಿ, ರಾಮನಗರಕ್ಕೆ ಯಾವ ನೀರಾವರಿ ಯೋಜನೆ ಮಾಡಬೇಕು ಎಂದು ಗೊತ್ತಿದೆ. ಎಷ್ಟೇ ಕಷ್ಟ ಆದರೂ ನಮ್ಮ ಅವಧಿಯಲ್ಲಿ ಜಿಲ್ಲೆಯ ಕೆರೆಗಳನ್ನು ತುಂಬಿಸಿ ನಮ್ಮ ಜನ ಇಲ್ಲೇ ಬದುಕು ಕಟ್ಟಿಕೊಳ್ಳಲು ಕಾರ್ಯಕ್ರಮ ರೂಪಿಸಿದ್ದೇವೆ. ಅತ್ಯಾಧುನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ನೀವು ವ್ಯವಸಾಯ ಮಾಡಿ ಬದುಕು ಕಟ್ಟಿಕೊಳ್ಳಬಹುದು. ಹುಬ್ಬಳ್ಳಿ, ಧಾರವಾಡ ಸೇರಿದಂತೆ ಬೇರೆ ಜಿಲ್ಲೆಗಳಲ್ಲಿ ಹೆಚ್ಚು ರೇಷ್ಮೆ ಬೆಳೆಯುತ್ತಿದ್ದಾರೆ. ಕನಕಪುರದಲ್ಲಿ ಮಾಡಿರುವ ಹಾಲಿನ ಡೈರಿ ಅಮೂಲ್ ಡೈರಿ ಮಾದರಿಯಲ್ಲಿದೆ. ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಕೆಲಸ ಮಾಡಿ ನಾವು ವಿರೋಧ ಪಕ್ಷದವರಿಗೆ ತೋರಿಸುವುದಕ್ಕಿಂತ ನಮ್ಮ ಆತ್ಮಸಾಕ್ಷಿಗೆ ತೃಪ್ತಿಪಡಿಸುವಂತೆ ಮಾಡಬೇಕು. ಗ್ಯಾರಂಟಿ ಯೋಜನೆಗಳಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸರಾಸರಿ ವರ್ಷಕ್ಕೆ 250 ಕೋಟಿ ಹಣ ಹೋಗುತ್ತಿದೆ.

ಈ ಜಿಲ್ಲೆಯಲ್ಲಿ ಆಗಬೇಕಿರುವ ಕಾರ್ಯಗಳ ಬಗ್ಗೆ ಚರ್ಚೆ ಮಾಡಲು ಬಜೆಟ್ ಮಂಡನೆಯಾಗುವುದರೊಳಗೆ ಅಧಿಕಾರಿಗಳು ಹಾಗೂ ರಾಮಲಿಂಗಾ ರೆಡ್ಡಿ ಅವರು ಚರ್ಚೆ ಮಾಡುತ್ತೇನೆ. ಮುಂದಿನ ಚುನಾವಣೆ ವೇಳೆಗೆ ನಮ್ಮ ಜನ ನಮ್ಮ ಕೆಲಸಗಳನ್ನು ಗುರುತಿಸಬೇಕು. ಈ ಭಾಗದ ಲೋಕಸಭಾ ಕ್ಷೇತ್ರದಲ್ಲಿ ಆರ್ ಆರ್ ನಗರ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳಲ್ಲಿ ಹಿನ್ನಡೆಯಾಗಿದ್ದು, ಅಲ್ಲಿ ಸಂಘಟನೆಗೆ ಏನು ಮಾಡಬೇಕೋ ಮಾಡುತ್ತಿದ್ದೇವೆ. ನಮಗೆ ಯಾರ ಮೇಲೂ ದ್ವೇಷ ಸಾಧಿಸುವ ಅಗತ್ಯವಿಲ್ಲ. ಕೆಲಸ ಮಾಡಿ ಜನರ ಹೃದಯ ಗೆಲ್ಲಬೇಕು” ಎಂದರು.

ನಿಮ್ಮಲ್ಲಿರುವ ಭಿನ್ನಾಭಿಪ್ರಾಯ ಸರಿಪಡಿಸಿಕೊಳ್ಳಿ

“ನೀವುಗಳು ಸ್ಥಳೀಯ ಮಟ್ಟದಲ್ಲಿ ಇರುವ ಭಿನ್ನಾಭಿಪ್ರಾಯ ಸರಿಪಡಿಸಿಕೊಳ್ಳಬೇಕು. ಲೋಕಸಭೆ ಚುನಾವಣೆಯಲ್ಲಿ ಜನರಿಗೆ ಸುರೇಶ್ ಮೇಲೆ ಬೇಸರವಾಗಿ ಸೋಲಾಗಿಲ್ಲ. ನಿಮ್ಮ ನಿಮ್ಮಲ್ಲಿರುವ ಕೋಪ, ಭಿನ್ನಾಭಿಪ್ರಾಯದಿಂದ ಸೋಲಾಗಿದೆ. ನಾನು ಹಾಗೂ ಯೋಗೇಶ್ವರ್ ಅವರ ಮಧ್ಯೆ ಎಷ್ಟೇ ಜಗಳವಿದ್ದರೂ ಪಕ್ಷ ಮುಖ್ಯ ಎಂದು ನಾವು ಎಲ್ಲವನ್ನು ಮರೆತು ಪಕ್ಷದ ಟಿಕೆಟ್ ನೀಡಿ ಚುನಾವಣೆ ಮಾಡಿದ್ದೇವೆ. ಚುನಾವಣೆಯಲ್ಲಿ ಸೋತ ಬಳಿಕ ನಾನು ಚನ್ನಪಟ್ಟಣವನ್ನು ಬಿಡಲಿಲ್ಲ. ನಮ್ಮ ನಾಯಕರನ್ನು ಹಗಲು ರಾತ್ರಿ ಬಿಡದೇ ಚನ್ನಪಟ್ಟಣದಲ್ಲಿ ಸಂಘಟನೆ ಮಾಡಲಾಯಿತು. ಆಗ ಯೋಗೇಶ್ವರ್ ಅವರಿಗೆ ಈ ಹಸ್ತವೇ ಗ್ಯಾರಂಟಿ ಎಂದು ಅರಿವಾಯಿತು. ಆಗ ಬೇಷರತ್ತಾಗಿ ನಮ್ಮ ಪಕ್ಷಕ್ಕೆ ಬಂದಿದ್ದಾರೆ.

ಇಲ್ಲಿರುವ ನಮ್ಮ ನಾಯಕರು ದಿನಾ ಬೆಳಗ್ಗೆ ಬಂದು ವರ್ಗಾವಣೆ ಮಾಡಿಸಲು ಮುಂದಾಗಬೇಡಿ. ಚುನಾವಣೆ ಸಮಯದಲ್ಲಿ ಯಾರೂ ಬರಲಿಲ್ಲ, ಈಗ ಎಲ್ಲರೂ ಹುಡುಕಿಕೊಂಡು ಬರುತ್ತಿದ್ದಾರೆ. ನಿಮ್ಮ ಸ್ವಂತದವರು ಯಾರು, ಬೇರೆಯವರು ಯಾರು ಎಂದು ನಮಗೆ ತಿಳಿಯುತ್ತದೆ. ಇದಕ್ಕೆಲ್ಲ ನೀವು ತಲೆಹಾಕಬೇಡಿ. ಕ್ಷೇತ್ರದ ಅಭಿವೃದ್ಧಿಗೆ ಏನು ಮಾಡಬೇಕೋ ಮಾಡುತ್ತೇವೆ.

ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದಿರುವವರೂ ಪ್ರತಿ ಬೂತ್ ನಲ್ಲಿ ಡಿಜಿಟಲ್ ಯೂತ್ ನೇಮಿಸಬೇಕು. ಈ ಕಾರ್ಯದದಲ್ಲಿ ಜಿಲ್ಲಾ ಕಾಂಗ್ರೆಸ್ ನವರಿಗೂ ತಿಳಿಸುತ್ತಿದ್ದೇನೆ. ಇಲ್ಲಿ ಆಗುತ್ತಿರುವ ಎಲ್ಲಾ ಕಾರ್ಯಗಳನ್ನು ಪ್ರಚಾರ ಮಾಡಬೇಕು. ಇಲ್ಲಿ ಯಾರೇ ಲಂಚ ಕೇಳಿದರೂ ನನ್ನ ಗಮನಕ್ಕೆ ತರಬೇಕು. ಈ ಜಿಲ್ಲೆಯಲ್ಲಿ ಶುದ್ಧ ಆಡಳಿತ ನಡೆಯಬೇಕು. ಇದಕ್ಕೆ ನಿಮ್ಮ ಸಹಕಾರ ಬೇಕು” ಎಂದು ತಿಳಿಸಿದರು.

Related Posts

Leave a Reply

Your email address will not be published. Required fields are marked *