Menu

ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳ ನೋಟಿಫಿಕೇಷನ್‌ಗೆ ಕಾನೂನು ತೊಡಕಿಲ್ಲ: ಡಿಕೆ ಶಿವಕುಮಾರ್‌

“ಆಲಮಟ್ಟಿ ಅಣೆಕಟ್ಟು ಎತ್ತರ ಹೆಚ್ಚಳಕ್ಕೆ ನೋಟಿಫಿಕೇಷನ್ ಮಾಡುವುದಕ್ಕೆ ಯಾವುದೇ ಕಾನೂನಿನ ತೊಡಕಿಲ್ಲ, ತಡೆಯಾಜ್ಞೆಯೂ ಇಲ್ಲ ಎಂದು ಕಾನೂನು ತಜ್ಞರು ಹೇಳಿದ್ದಾರೆ. ಸದ್ಯದಲ್ಲೇ ನಮ್ಮದೇ ಆದ ತೀರ್ಮಾನ ಮಾಡುತ್ತೇವೆ. ರಾಜ್ಯದಲ್ಲಿಯೂ ಸರ್ವಪಕ್ಷಗಳ ಸಭೆ ಕರೆಯಬೇಕಾಗಬಹುದು” ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಶಿವಕುಮಾರ್‌, ದೆಹಲಿ ಪ್ರವಾಸದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. “ದೆಹಲಿಯಲ್ಲಿ ಎರಡು ದಿನ ವಾಸ್ತವ್ಯ ಹೂಡಿ ರಾಜ್ಯದ ಸಂಸದರ ಸಭೆ ನಡೆಸಲಾಯಿತು. 24 ಜನ ಸಂಸದರು ಬಂದಿದ್ದರು. ಜನತಾದಳ ಹೊರತು ಪಡಿಸಿ ಬಿಜೆಪಿ, ಕಾಂಗ್ರೆಸ್, ಸ್ವತಂತ್ರ ಹಾಗೂ ನಾಮನಿರ್ದೇಶಿತ ಸಂಸದರು ಸಭೆಯಲ್ಲಿ ಹಾಜರಿದ್ದರು. ರಾಜ್ಯದ ಅನೇಕ ನೀರಾವರಿ ಯೋಜನೆಗಳ ಸ್ಥಿತಿಗತಿ ಬಗ್ಗೆ ಅವರಿಗೆ ವಿವರಿಸಿದ್ದೇನೆ” ಎಂದು ತಿಳಿಸಿದರು.

“ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಪಿ.ಸಿ.ಮೋಹನ್ ಅವರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಸೋಮಣ್ಣ ಅವರು ಹಾಗೂ ಪ್ರಹ್ಲಾದ್ ಜೋಶಿ ಅವರು ‘ಸಭೆಗೆ ಬರಲು ಆಗುವುದಿಲ್ಲ. ಇನ್ನೊಂದು ದಿನ ಹಾಜರಾಗುತ್ತೇವೆ‌’ ಎಂದು ಹೇಳಿದರು. ಪ್ರಧಾನಿಯವರು ಹಾಗೂ ಜಲ ಶಕ್ತಿ ಸಚಿವರನ್ನು ಸರ್ವಪಕ್ಷಗಳ ನಿಯೋಗ ಕರೆದುಕೊಂಡು ಹೋಗಿ ಭೇಟಿಯಾಗುವ ತೀರ್ಮಾನ ಮಾಡಲಾಗಿದೆ. ಇದಕ್ಕೆ ಒಮ್ಮತವೂ ಮೂಡಿದೆ” ಎಂದರು.

“ಈ ವಿಚಾರದಲ್ಲಿ ನಮ್ಮ ಕಾನೂನು ಸಲಹೆಗಾರರಾದ ಮೋಹನ್ ಕಾತರಕಿ, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್, ಅಡ್ವೋಕೇಟ್ ಜನರಲ್ ಅವರು ಒಂದೆರಡು ಒಳ್ಳೆಯ ವಿಚಾರಗಳನ್ನು ತಿಳಿಸಿದ್ದಾರೆ. ಈ ಬಗ್ಗೆ ಸದ್ಯದಲ್ಲೇ ತೀರ್ಮಾನ ಮಾಡುತ್ತೇವೆ” ಎಂದು ಮಾಹಿತಿ ನೀಡಿದರು.

“ನಾಗರಿಕ ವಿಮಾನಯಾನ ಸಚಿವರನ್ನು ಭೇಟಿ ಮಾಡಿ ಪ್ರೀಮಿಯಂ ಎಫ್ ಎಆರ್, ಕಟ್ಟಡಗಳ ಎತ್ತರದ ಕಾನೂನುಗಳು ನಮ್ಮ ಹಾಗೂ ಬೇರೆ, ಬೇರೆ ರಾಜ್ಯಗಳಲ್ಲಿ ಹೇಗಿದೆ ಎನ್ನುವ ವಿಚಾರಗಳನ್ನು ಅವರ ಗಮನಕ್ಕೆ ತರಲಾಗಿದೆ. ರಕ್ಷಣಾ ಸಚಿವರನ್ನು ಶೀಘ್ರದಲ್ಲೇ ಭೇಟಿ ಮಾಡಿ ಚರ್ಚೆ ನಡೆಸಬೇಕಿದೆ. ನಮ್ಮ ರಾಜ್ಯದ ಸಮಸ್ಯೆಗಳನ್ನು ತಿಳಿಸಿದ್ದೇವೆ. ಎಲ್ಲರೂ ಧನಾತ್ಮಕವಾಗಿ ಸ್ಪಂದಿಸಿದ್ದಾರೆ” ಎಂದರು.

ಎರಡನೇ ವಿಮಾನ ನಿಲ್ದಾಣದ ಬಗ್ಗೆ ಕೇಳಿದಾಗ, “ಸಚಿವರಾದ ಎಂ.ಬಿ.ಪಾಟೀಲ್ ಅವರು ಪ್ರಸ್ತಾವನೆ ಕೊಟ್ಟಿದ್ದಾರೆ. ಅದಕ್ಕೆ ಸಚಿವರು ಅಭಿಪ್ರಾಯವನ್ನೂ ತಿಳಿಸಿದ್ದಾರೆ. ಕ್ಯಾಬಿನೆಟ್ ಸಭೆಯ ಮುಂದಿಟ್ಟು ಸಾಧಕ ಭಾದಕಗಳನ್ನು ಚರ್ಚೆ ನಡೆಸಬೇಕು. ಭೂಸ್ವಾಧೀನ, ಹಣಕಾಸು ಮತ್ತಿತರ ಸಂಗತಿಗಳ ಬಗ್ಗೆ ಚರ್ಚೆ ನಡೆಸಬೇಕಿದೆ. ಅವರು ಸಹ ಅಧ್ಯಯನ ನಡೆಸಿ ಒಂದು ವರದಿ ನೀಡಿದ್ದಾರೆ‌. ಕಟ್ಡಡಗಳ ಎತ್ತರದ ಮಿತಿ ಕುರಿತಂತೆ ಜಾಗತಿಕ ನಗರಗಳಲ್ಲಿ ಯಾವ ರೀತಿಯ ಕಾನೂನುಗಳಿವೆ ಎಂದು ಕೇಂದ್ರ ವಿಮಾನಯಾನ ಸಂಸ್ಥೆಯವರು ವರದಿ ಮಾಡಿದ್ದಾರೆ. ಇದರಿಂದ ಪ್ರಪಂಚದ ಬೇರೆ ಕಡೆ ಇರುವ ಮಾನದಂಡಗಳ ಬಗ್ಗೆ ತಿಳಿಯಲಿದೆ‌. ಆ ವರದಿ ತರಿಸಿಕೊಂಡು ತೀರ್ಮಾನ ಮಾಡುತ್ತೇವೆ” ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *