Menu

ಅವಿಶ್ವಾಸ ನಿರ್ಣಯಕ್ಕೆ ಸೋಲು ಖಚಿತ: ಸಚಿವ ಬೈರತಿ ಸುರೇಶ್

bhirati suresh

ಸುವರ್ಣವಿಧಾನಸೌಧ: ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಅವಿಶ್ವಾಸ ನಿರ್ಣಯ ಮಂಡಿಸಿದರೆ ಅದಕ್ಕೆ ಸೋಲಾಗುವುದು ಶತಃಸಿದ್ಧ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ನಮ್ಮ ಸರ್ಕಾರದ ವಿರುದ್ಧ ಹಲವಾರು ಅಸ್ತ್ರಗಳನ್ನು ಪ್ರಯೋಗಿಸಲಾಗುವುದು ಎಂದು ಪ್ರತಿ ಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ. ಆದರೆ, ಅವರ ಪಕ್ಷದ ಬತ್ತಳಿಕೆಯಲ್ಲಿ ಬಾಣವೇ ಇಲ್ಲ ಎಂದು ವ್ಯಂಗ್ಯವಾಡಿದರು.

ಪ್ರತಿಪಕ್ಷ ಬಿಜೆಪಿಯಲ್ಲೇ ಅಶೋಕ ಬಣ, ವಿಜಯೇಂದ್ರ ಬಣ, ಕುಮಾರ್ ಬಂಗಾರಪ್ಪ ಬಣ ಮತ್ತು ರಮೇಶ್ ಜಾರಕಿಹೊಳಿ ಬಣಗಳಿವೆ. ಮೊದಲು ಆ ಬಣಗಳ ಕಿತ್ತಾಟವನ್ನು ಅಶೋಕ್ ಅವರು ಪರಿಹರಿಸಲಿ. ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಣಗಳಿಲ್ಲ. ನಮ್ಮದೇನಿದ್ದರೂ ಕಾಂಗ್ರೆಸ್ ಬಣ ಎಂದು ಅವರು ಸ್ಪಷ್ಟಪಡಿಸಿದರು.

ಬಿಜೆಪಿಯವರು ಜನರಲ್ಲಿ ಕೇವಲ ಮತೀಯ ಭಾವನೆಗಳನ್ನು ಕೆರಳಿಸಿ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆಯೇ ಹೊರತು, ಯಾವತ್ತಾದರೂ ಅಭಿವೃದ್ಧಿ ಬಗ್ಗೆ ರಾಜಕೀಯ ಮಾಡಿಲ್ಲ. ಜನರ ಪರವಾಗಿ ಎಂದಿಗೂ ಕೆಲಸವನ್ನೂ ಮಾಡಿಲ್ಲ ಎಂದು ಸಚಿವ ಬೈರತಿ ಸುರೇಶ್ ಟೀಕಿಸಿದರು.

ವಿಪಕ್ಷ ಶಾಸಕರೇ ನಮ್ಮ ಪರವಿದ್ದಾರೆ

ನಮ್ಮ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಹೇಳಿಕೊಂಡಿವೆ. ಆ ನಿರ್ಣಯ ಮಂಡಿಸಲಿ. ಆ ಪಕ್ಷಗಳ ಕೆಲವು ಶಾಸಕರೇ ನಮ್ಮ ಸರ್ಕಾರದ ಪರವಾಗಿ ಮತ ಹಾಕುವ ವಿಶ್ವಾಸ ನನಗಿದೆ. ಹೀಗಾಗಿ ಅವಿಶ್ವಾಸ ನಿರ್ಣಯಕ್ಕೆ ಸೋಲು ಖಚಿತವಾಗಲಿದೆ ಎಂದು ಸುರೇಶ್ ಕಿಡಿ ಕಾರಿದರು.

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಸಮರ್ಥವಾಗಿ ಆಡಳಿತ ನಡೆಸುತ್ತಿದ್ದಾರೆ. ಯಾರು ಯಾವಾಗ, ಎಷ್ಟು ದಿನ ಮುಖ್ಯಮಂತ್ರಿಯಾಗಿರಬೇಕೆಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ. ಹೀಗಾಗಿ ನಾಯಕತ್ವದ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ರೈತರ ಪರ ಸರ್ಕಾರ

ಪ್ರತಿಪಕ್ಷಗಳು ರೈತರನ್ನು ಎತ್ತಿಕಟ್ಟಿ ಅವರ ಪರವಾಗಿದ್ದೇವೆ ಎಂದು ನಾಟಕವಾಡುತ್ತಿದ್ದಾರೆ. ಧೈರ್ಯವಿದ್ದರೆ ಅವರದೇ ಸರ್ಕಾರವಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿ ಎಂದು ಸವಾಲು ಹಾಕಿದ ಸುರೇಶ್, ಕಬ್ಬು ಮತ್ತು ಮೆಕ್ಕೆಜೋಳ ಸೇರಿದಂತೆ ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ನೀಡುವ ಮೂಲಕ ನಮ್ಮ ಸರ್ಕಾರ ರೈತರ ಪರವಾಗಿ ನಿಂತಿದೆ ಎಂದು ಸ್ಪಷ್ಟಪಡಿಸಿದರು.
ಈ ಬಾರಿಯ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಮತ್ತು ರೈತರ ಪರವಾದ ನಿರ್ಣಯ ತೆಗೆದುಕೊಳ್ಳುವುದು ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ. ಈ ದಿಸೆಯಲ್ಲಿ ಪ್ರತಿಪಕ್ಷಗಳು ಈಗಲಾದರೂ ಕ್ಷುಲ್ಲಕ ರಾಜಕಾರಣ ಮಾಡುವುದನ್ನು ಬಿಟ್ಟು ರೈತರ ಪರವಾಗಿ ಧ್ವನಿ ಎತ್ತುವುದನ್ನು ಕಲಿತುಕೊಳ್ಳಲಿ ಎಂದು ಬೈರತಿ ಸುರೇಶ್ ಅವರು ಪ್ರತಿಪಕ್ಷಗಳಿಗೆ ಸಲಹೆ ನೀಡಿದರು.

Related Posts

Leave a Reply

Your email address will not be published. Required fields are marked *