ಬೆಳಗಾವಿ: ಬೆಂಗಳೂರು ಮೈಸೂರು ಇನ್ಸ್ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಆದೇಶ ಇರುವ ಹಿನ್ನೆಲೆಯಲ್ಲಿ ಸರ್ಕಾರವು ಯೋಜನೆಯಲ್ಲಿ ಯಾವುದೇ ಬದಲಾವಣೆ ತರಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯರ ಪ್ರಶ್ನೆಗಳಿಗೆ ಜಲಸಂಪನ್ಮೂಲ ಸಚಿವರೂ ಆಗಿರುವ ಶಿವಕುಮಾರ್ ಅವರು ಗುರುವಾರ ಉತ್ತರಿಸಿದರು.
ಕಾಂಗ್ರೆಸ್ ಸದಸ್ಯರಾದ ಮಧು ಮಾದೇಗೌಡ ಅವರು ಬಿಎಂಐಸಿಪಿಎ ಯೋಜನೆ ವಿಚಾರವಾಗಿ ನಮ್ಮ ಭಾಗದಲ್ಲಿ ಎನ್ ಹೆಚ್ 275 ಬಂದಿದ್ದು, ಮತ್ತೊಂದು ಹೆದ್ದಾರಿ ಅಗತ್ಯವಿದೆಯೇ? ಇಲ್ಲಿ ಭೂ ಪರಿವರ್ತನೆ ಹಾಗೂ ನಕ್ಷೆ ಅನುಮೋದನೆಗೆ ಸಮಸ್ಯೆ ಎದುರಾಗಿದೆ ಎಂದು ಕೇಳಿದಾಗ, “1995ರಲ್ಲೇ ಈ ಬೆಂಗಳೂರು ಮೈಸೂರು ಕಾರಿಡಾರ್ ಯೋಜನೆಯನ್ನು ದೇವೇಗೌಡರು ಸಿಎಂ ಆಗಿದ್ದಾಗ ಅನುಮೋದನೆ ನೀಡಲಾಗಿತ್ತು. ಇಡೀ ದೇಶಕ್ಕೆ ಮಾದರಿಯಾಗುವಂತಹ ಮಾಸ್ಟರ್ ಪ್ಲಾನ್ ಈ ಯೋಜನೆ. ಕಾರಣಾಂತರಗಳಿಂದ ಇದು ಪೂರ್ಣಗೊಂಡಿಲ್ಲ. ಸದಸ್ಯರು ಈ ಭಾಗದಲ್ಲಿ ಭೂಮಿ ಪರಿವರ್ತನೆ ಬಗ್ಗೆ ಕೇಳಿದ್ದು, ಈಗ ನಾವು ಆನ್ ಲೈನ್ ನಲ್ಲಿ ಭೂಮಿ ಪರಿವರ್ತನೆಗೆ ಅವಕಾಶ ಕಲ್ಪಿಸಿದ್ದೇವೆ. ಇನ್ನು ಕಟ್ಟಡ ನಕ್ಷೆಗೆ ಅನುಮತಿ ಪಡೆಯಲು ಸ್ಥಳೀಯ ಯೋಜನಾ ಪ್ರಾಧಿಕಾರಕ್ಕೆ ಅಧಿಕಾರ ನೀಡಲಾಗಿದೆ” ಎಂದು ತಿಳಿಸಿದರು.
“ಸ್ಥಳೀಯ ಶಾಸಕರಾದ ಉದಯ್ ಈ ವಿಚಾರವಾಗಿ ನನ್ನ ಬಳಿ ಸುಮಾರು ಹತ್ತು ಬಾರಿ ಚರ್ಚೆ ಮಾಡಿದ್ದಾರೆ. ನಾನು ಅದನ್ನು ಪರಿಶೀಲಿಸಿದೆ. ಆದರೆ ಸುಪ್ರೀಂ ಕೋರ್ಟ್ ನಲ್ಲಿ ತ್ರಿಸದಸ್ಯ ಪೀಠದಿಂದ ತೀರ್ಪು ಬಂದಿದ್ದು, ಈ ಯೋಜನೆಯನ್ನು ಮೂಲ ಪರಿಕಲ್ಪನೆಯಲ್ಲಿ ಜಾರಿಗೆ ತರಬೇಕು. ಯಾವುದೇ ಬದಲಾವಣೆ ಮಾಡುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ. ಹೀಗಾಗಿ ಸರ್ಕಾರ ಇದರಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿ ಕೂಡ ಇದೆ. ಪರಮೇಶ್ವರ್ ಅವರ ನೇತೃತ್ವದಲ್ಲಿ ಸಂಪುಟ ಉಪ ಸಮಿತಿಯನ್ನು ರಚಿಸಲಾಗಿದೆ. ಮಂಡ್ಯದಲ್ಲಿ ನಗರ ಯೋಜನೆ ಕಚೇರಿ ಆರಂಭಿಸಲಾಗಿದೆ. ಈ ಯೋಜನೆಯಲ್ಲಿ ಬದಲಾವಣೆಗೆ ಅವಕಾಶವಿಲ್ಲ, ಆದರೆ ಸ್ಥಳಿಯವಾಗಿ ಇರುವ ಸಮಸ್ಯೆಗಳನ್ನು ನಿವಾರಿಸಲು ನಾವು ಬದ್ಧವಾಗಿದ್ದೇವೆ” ಎಂದು ತಿಳಿಸಿದರು.
ನನಗೆ ಜೈಲಿಂದ ಯಾವ ಕರೆಗಳು ಬಂದಿಲ್ಲ
ಬಿಜೆಪಿ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರ್ ಅವರು ಗೃಹ ಸಚಿವ ಪರಮೇಶ್ವರ್ ಅವರಿಗೆ ಜೈಲಿನಲ್ಲಿ ಉಗ್ರರು ಸೇರಿದಂತೆ ಖೈದಿಗಳಿಗೆ ಮೊಬೈಲ್, ಟಿ.ವಿಯಂತಹ ಸೌಲಭ್ಯ ಕಲ್ಪಿಸಲಾಗಿದೆ. ಅವರು ಜೈಲಿನಿಂದಲೇ ಹಾಟ್ ಲೈನ್ ಕರೆ ಬಂದಿದೆ. ಈ ವಿಚಾರವಾಗಿ ಪತ್ರಿಕೆಗಳಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹೆಸರು ಬಂದಿದೆ ಎಂದು ಪ್ರಶ್ನೆ ಕೇಳಿದರು.
ಈ ವೇಳೆ ಮಧ್ಯ ಪ್ರವೇಶಿಸಿ ಸ್ಪಷ್ಟನೆ ನೀಡಿದ ಶಿವಕುಮಾರ್ ಅವರು, “ನಾನು ಇಂತಹ ಯಾವುದೇ ಹಾಟ್ ಲೈನ್ ಕರೆಗಳನ್ನು ಸ್ವೀಕರಿಸುವುದಿಲ್ಲ. ನನಗೆ ಜೈಲಿನಿಂದ ಯಾವುದೇ ಕರೆ ಬಂದಿಲ್ಲ. ಪತ್ರಿಕೆಗಳಲ್ಲಿ ಏನು ಬಂದಿದೆಯೋ? ನೀವು ಅದನ್ನು ಇಲ್ಲಿ ಪ್ರಸ್ತಾಪಿಸಿದರೆ, ನಂತರ ನೀವು ಅದಕ್ಕೂ ಹಾಗೂ ನನ್ನ ಮಧ್ಯೆ ಬೇರೆ ರೀತಿ ಲಿಂಕ್ ಬೆಳೆಸುತ್ತೀರಿ. ಹೀಗಾಗಿ ನಾನು ಈ ವಿಚಾರವಾಗಿ ಸ್ಪಷ್ಟಪಡಿಸಲು ಬಯಸುತ್ತೇನೆ. ನಾನು ಜೈಲು ಮಂತ್ರಿಯಾಗಿದ್ದೆ, ಜೈಲಲ್ಲಿ ಇದ್ದೆ. ಜೈಲಲ್ಲಿ ಏನೆಲ್ಲಾ ನಡೆಯುತ್ತದೆ ಎಂದು ತಿಳಿದುಕೊಂಡಿದ್ದೇನೆ. ಪತ್ರಿಕೆಗಳಲ್ಲಿ ಸಾವಿರ ಬಂದಿರಬಹುದು. ಆದರೆ ಇದಕ್ಕೂ ನನಗೂ ನಂಟು ಹಾಕಬೇಡಿ” ಎಂದು ತಿಳಿಸಿದರು.


