Menu

ನವೆಂಬರ್ 20ರಂದು ನಿತೀಶ್ ಕುಮಾರ್ ಬಿಹಾರ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ!

nitish kumar

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ ಹಿನ್ನೆಲೆಯಲ್ಲಿ ಜೆಡಿಯು ಮುಖಂಡ ನಿತೀಶ್ ಕುಮಾರ್ ದಾಖಲೆಯ 10ನೇ ಬಾರಿ ಮುಖ್ಯಮಂತ್ರಿಯಾಗಿ ನವೆಂಬರ್ 20ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ NDA ಭರ್ಜರಿ ಗೆಲುವು ದಾಖಲಿಸಿದೆ. ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದು, ನವೆಂಬರ್ 20 ರಂದು ರಾಜ್ಯ ರಾಜಧಾನಿಯ ಐತಿಹಾಸಿಕ ಗಾಂಧಿ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ಮತ್ತೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಈ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಸಂಪುಟದ ಹಲವಾರು ಸದಸ್ಯರು, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಸಂಸದರು ಮತ್ತು ಮಿತ್ರ ಪಕ್ಷಗಳ ಉನ್ನತ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟ 35 ಸ್ಥಾನಗಳಲ್ಲಿ ಗೆಲುವು ಪಡೆದುಕೊಂಡಿದ್ದರೆ, ಎನ್​ಡಿಎ ಮೈತ್ರಿಕೂಟ 202 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಮೂರನೇ 2ರಷ್ಟು ಬಹುಮತ ಪಡೆದುಕೊಂಡಿತ್ತು.

ಕಳೆದ 20 ವರ್ಷದಲ್ಲಿ ನಿತೀಶ್​ ಕುಮಾರ್​ 10ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. 2005ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಅವರು 2014-15 ರಲ್ಲಿ ಅಲ್ಪಾವಧಿಯ ಆಡಳಿತಾವಧಿ ಹೊರತುಪಡಿಸಿ ನಿರಂತರವಾಗಿ ಸ್ಥಾನ ಪಡೆದಿದ್ದಾರೆ. ಆಗಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಯು ಕಳಪೆ ಪ್ರದರ್ಶನ ನೀಡಿದ ನಂತರ ಅವರು ಜಿತನ್ ರಾಮ್ ಮಾಂಝಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಕ ಮಾಡಿದ್ದರು.

ಸಮಾರಂಭಕ್ಕೆ ಗಂಗಾ ನದಿಯ ಸಮೀಪದಲ್ಲಿರುವ 62 ಎಕರೆ ವಿಸ್ತೀರ್ಣದ ವಿಶಾಲವಾದ ಸ್ಥಳವನ್ನು ಸೂಚಿಸಲಾಗಿದೆ. ಗಣ್ಯರ ಆಗಮನ ಮತ್ತು ನಿರ್ಗಮನ ಮತ್ತು ಸಮಾರಂಭದಲ್ಲಿ ಅತಿಥಿಗಳಿಗೆ ಅವಕಾಶ, ಸುಗಮ ನಿರ್ವಹಣೆ ದೃಷ್ಟಿಯಿಂದ ಪಾಟ್ನಾ ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ಪ್ರಾರಂಭಿಸಿದೆ.

ನವೆಂಬರ್​ 17ರಿಂದ 20ರವರೆಗೆ ಈ ಗಂಗಾ ನದಿ ಪ್ರದೇಶವೂ ಸಾರ್ವಜನಿಕರಿಗೆ ಬಂದ್​ ಆಗಿರಲಿದೆ ಎಂದು ಪಾಟ್ನಾ ಜಿಲ್ಲಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಲೋಕೇಶ್​ ಕುಮಾರ್​ ಝಾ ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *