Menu

ಕೇರಳದಲ್ಲಿ ನಿಪಾ ವೈರಸ್‌ ಭೀತಿ: ಆರೋಗ್ಯ ಇಲಾಖೆ ಕಟ್ಟೆಚ್ಚರ

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ 38 ವರ್ಷದ ಮಹಿಳೆಗೆ ನಿಪಾ ವೈರಸ್ ಸೋಂಕು ದೃಢಪಟ್ಟಿದ್ದು, ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತವು ತುರ್ತಾಗಿ ನಿಯಂತ್ರಣ ಕ್ರಮ ಜಾರಿಗೊಳಿಸಿದೆ.

ಪುಣೆ ವೈರಾಲಜಿ ಲ್ಯಾಬೋರೇಟರಿಯಿಂದ ಬಂದ ವರದಿಯು ನಿಪಾ ಸೋಂಕು ದೃಢಪಡಿಸಿದ್ದು, ನೂರಕ್ಕೂ ಹೆಚ್ಚು ಜನ ಹೈರಿಸ್ಕ್ ಕಾಂಟ್ಯಾಕ್ಟ್‌ ಪಟ್ಟಿಯಲ್ಲಿದ್ದಾರೆ. ಸೋಂಕಿತ ಮಹಿಳೆ ಪ್ರಸ್ತುತ ಪೆರಿಂತಲ್ಮನ್ನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಗೆ 20 ದಿನಗಳ ಹಿಂದೆ ಜ್ವರ ಕಾಣಿಸಿಕೊಂಡು ಮನೆಯ ಸಮೀಪದ ಮಣ್ಣಾರ್ಕಾಡ್, ಪಾಲೋಡ್ ಮತ್ತು ಕರಿಂಕಲ್ಲತಾಣಿಯ ಖಾಸಗಿ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆಕೆ ಮಕ್ಕಳೊಂದಿಗೆ ವಾಸವಿದ್ದು, ಪತಿ ವಿದೇಶದಲ್ಲಿದ್ದು ಈಗ ಊರಿಗೆ ಮರಳಿದ್ದಾರೆ.

ಈವರೆಗೆ ಮಹಿಳೆ ಬಿಟ್ಟು ಯಾವುದೇ ವ್ಯಕ್ತಿಗೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಮಹಿಳೆಯ ಮಕ್ಕಳಿಗೂ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ. ಮಹಿಳೆ ತಂಗಿದ್ದ ನಾಟ್ಟುಕಲ್ ಕಿಳಕ್ಕುಂಪರಂ ಪ್ರದೇಶದ 3 ಕಿ.ಮೀ ವ್ಯಾಪ್ತಿಯನ್ನು ಸಂಪೂರ್ಣ ಕಂಟೈನ್ಮೆಂಟ್ ವಲಯವೆಂದು ಘೋಷಿಸಲಾಗಿದೆ.

ಪಾಲಕ್ಕಾಡ್‌ನ 5 ವಾರ್ಡ್‌ಗಳಲ್ಲೂ ನಿಗಾ ವಹಿಸಲಾಗಿದೆ. ಪಾಲಕ್ಕಾಡಿನ ತಚ್ಚನಾಟ್ಟುಕರದ ಮತ್ತೊಬ್ಬ ನಿವಾಸಿಗೆ ನಿಪಾ ಸೋಂಕು ಇರಬಹುದು ಎಂದು ಶಂಕಿಸಲಾಗಿದೆ. ಮಾದರಿಗಳನ್ನು ಪುಣೆಯ ವೈರಾಲಜಿ ಲ್ಯಾಬ್‌ಗೆ ಕಳುಹಿಸಲಾಗಿದ್ದು, ವರದಿ ಬರಬೇಕಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ನಿಪಾ ವೈರಸ್ ಒಂದು ಜೂನೋಟಿಕ್ ವೈರಸ್ ಆಗಿದ್ದು, ಇದು ಹೆನಿಪಾ ವೈರಸ್ ಪ್ರಭೇದಕ್ಕೆ ಸೇರಿದೆ. ಬಾವಲಿಗಳಿಂದ ಹರಡುತ್ತದೆ. ಕೆಲವೊಮ್ಮೆ ಹಂದಿಗಳಿಂದಲೂ ಮನುಷ್ಯರಿಗೆ ಹರಡುತ್ತದೆ. ಮನುಷ್ಯರಿಂದ ಮನುಷ್ಯರಿಗೂ ರೋಗ ಹರಡುವ ಸಾಧ್ಯತೆ ಇದೆ.

Related Posts

Leave a Reply

Your email address will not be published. Required fields are marked *