ಲಕ್ಷಾಂತರ ವಾಹನಗಳು ಸಂಚರಿಸುವ ಬೆಂಗಳೂರಿನ ನೈಸ್ ರಸ್ತೆ ಟೋಲ್ ದರ ಮತ್ತೆ ಏರಿಕೆಯಾಗಿದೆ. ಪರಿಷ್ಕೃತ ದರ ಇಂದಿನಿಂದಲೇ (ಜುಲೈ 1) ಅನ್ವಯ ಆಗಲಿದೆ. ಸರಾಸರಿ ಶೇ15 ರ ವರೆಗೆ ಟೋಲ್ ಶುಲ್ಕ ಹೆಚ್ಚಳ ಆಗುತ್ತಿದೆ.
ಕರ್ನಾಟಕ ಸರ್ಕಾರದ ಟೋಲ್ ರಿಯಾಯಿತಿ ಒಪ್ಪಂದ ಹಾಗೂ ಪಿಡಬ್ಲ್ಯುಡಿ 40 ಸಿಆರ್ಎಂ 2008 ಅನ್ವಯ ಬಿಎಂಐಸಿ ಯೋಜನೆಯ ಫೇರಿಪೇರಲ್ ರಸ್ತೆ ಮತ್ತು ಲಿಂಕ್ ರಸ್ತೆಯ ಟೋಲ್ ದರಗಳನ್ನು ಜುಲೈ ಒಂದರಿಂದ ಪರಿಷ್ಕರಿಸಲಾಗುತ್ತಿದೆ ಎಂದುನಂದಿ ಏಕನಾಮಿಕಲ್ ಕಾರಿಡಾರ್ ಎಂಟರ್ಪ್ರೈಸಸ್ ಹೇಳಿದೆ.
ಈ ಟೋಲ್ ದರ ಏರಿಕೆ ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ನಂದಿ ಏಕನಾಮಿಕಲ್ ಕಾರಿಡಾರ್ ಎಂಟರ್ಪ್ರೈಸಸ್ ಅಧೀನಕ್ಕೆ ಒಳಪಡುವ ಒಟ್ಟು 8 ಟೋಲ್ ಪ್ಲಾಜಾಗಳಲ್ಲೂ ದರ ಏರಿಕೆ ಅನ್ವಯ ಆಗಲಿದೆ. ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ಕ್ಲೋವರ್ ಲೀಫ್ ಜಂಕ್ಷನ್, ಮೈಸೂರು ರಸ್ತೆ, ತುಮಕೂರು ರಸ್ತೆ ಮತ್ತು ಲಿಂಕ್ ರಸ್ತೆಗಳನ್ನು ಬಳಕೆ ಮಾಡುವ ವಾಹನ ಸವಾರರಿಗೆ ಹೊಸ ಟೋಲ್ ಬರೆ ಬೀಳಲಿದೆ.
ನೈಸ್ ರಸ್ತೆಯಲ್ಲಿ ಬೈಕ್ ಸವಾರರು ಕೂಡ ಟೋಲ್ ಪಾವತಿಸುತ್ತಿದ್ದು, ಈಗ ದರ ಏರಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಮಕೂರು ರಸ್ತೆಗೆ ಕಾರು– 233 ರೂ., ಬೈಕ್ 78 ರೂ., ಬಸ್ – 650 ರೂ. ಟೋಲ್ ದರವಿರಲಿದೆ. ಕನಕಪುರ ರಸ್ತೆಗೆ ಕಾರು – 110, ಬೈಕ್ – 33, ಬಸ್ 295 ರೂ., ಬನ್ನೇರುಘಟ್ಟ ರಸ್ತೆಗೆ ಕಾರು – 158, ಬೈಕ್ – 48, ಬಸ್ – 450, ಹೊಸೂರು ರಸ್ತೆಗೆ ಕಾರು – 223, ಬೈಕ್ – 78, ಬಸ್ – 645 ಟೋಲ್ ದರ ಇರುತ್ತದೆ.ಹಠಾತ್ ಟೋಲ್ ಶುಲ್ಕ ಹೆಚ್ಚಳಕ್ಕೆ ಸಾರ್ವಜನಿಕರಿಂದ ತೀವ್ರ ಪ್ರತಿರೋಧ ಕೇಳಿಬರುತ್ತಿದ್ದು, ಸರ್ಕಾರ ಹೇಗೆ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.