2023ರ ಗ್ರನೇಡ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋಸ್ಟ್ ವಾಂಟೆಡ್ ಶಂಕಿತ ಉಗ್ರನನ್ನು ರಾಷ್ಟ್ರೀಯ ತನಿಖಾ ತಂಡದ ಪೊಲೀಸರು ಬಂಧಿಸಿದ್ದಾರೆ. ಅರ್ಷದ್ ಖಾನ್ ಬಂಧಿತ ಉಗ್ರ, ಈ ಹಿಂದೆ ಆತ ಜಾಮೀನು ಪಡೆದು ತಲೆಮರೆಸಿಕೊಂಡಿದ್ದ. ಈಗ ಆರ್.ಟಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ.
ಸಿಸಿಬಿ ಅಧಿಕಾರಿಗಳು ನಡೆಸಿದ್ದ ಕಾರ್ಯಾಚರಣೆಯಲ್ಲಿ ಈ ಹಿಂದೆ ಅರ್ಷದ್ ಖಾನ್ ಅರೆಸ್ಟ್ ಆಗಿದ್ದ. ಜಾಮೀನಿನ ಮೇಲೆ ಹೊರಗೆ ಬಂದಿದ್ದ. ಬಳಿಕ ಪ್ರಕರಣ ಎನ್‌ಐಎಗೆ ವರ್ಗಾವಣೆಯಾಗಿತ್ತು. ಜಾಮೀನು ಸಿಕ್ಕಿದ ಮೇಲೆ ಕೋರ್ಟ್‌ಗೆ ಹಾಜರಾಗಿರಲಿಲ್ಲ. ಶಂಕಿತನ ಮೇಲೆ ಪ್ರೊಕ್ಲೋಮೇಷನ್ ಜಾರಿಯಾಗಿತ್ತು.
ಶಂಕಿತ ಉಗ್ರ ಕುಕ್ಕರ್ ಬಾಂಬ್ ಸ್ಪೋಟದ ರೂವಾರಿ ಜುನೈದ್ ಅಹ್ಮದ್ ಖಾಸಾ ಸ್ನೇಹಿತ. ಜುನೈದ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. ಉಗ್ರ ಅರ್ಷದ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ತಲೆಮರೆಸಿಕೊಂಡಿರುವ ಜುನೈದ್ ಬಗ್ಗೆ ಖಚಿತ ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ನಗದು ಬಹುಮಾನ ನೀಡುವುದಾಗಿ ಎನ್ಐಎ ಅಧಿಕೃತವಾಗಿ ಘೋಷಿಸಿದೆ.
2023ರ ಜುಲೈನಲ್ಲಿ. ಬೆಂಗಳೂರು ಪೊಲೀಸರ ಕೇಂದ್ರ ಅಪರಾಧ ವಿಭಾಗ ನಡೆಸಿದ ಕಾರ್ಯಾಚರಣೆಯಲ್ಲಿ ಹೆಬ್ಬಾಳ, ಆರ್.ಟಿ. ನಗರ ಮತ್ತು ಕೋಡಿಗೇಹಳ್ಳಿಯ ಅಡಗುತಾಣಗಳಲ್ಲಿ ಐವರು ಶಂಕಿತರನ್ನು ಬಂಧಿಸಲಾಗಿತ್ತು. ನಾಲ್ಕು ಸಜೀವ ಗ್ರೆನೇಡ್ ಗಳು, ಏಳು ಪಿಸ್ತೂಲುಗಳು, 45 ಸುತ್ತು ಜೀವಂತ ಗುಂಡುಗಳು, ವಾಕಿಟಾಕಿಗಳು ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಕ್ಕೆ ಪಡೆಯಲಾಗಿತ್ತು. ಜುನೈದ್ ನೇತೃತ್ವದಲ್ಲಿ ಈ ಗುಂಪು ನಗರದ ವಿವಿಧೆಡೆ ಸ್ಫೋಟ ನಡೆಸಲು ಸಜ್ಜಾಗಿತ್ತು ಎಂಬುದು ಪೊಲೀಸರ ತನಿಖೆಯಿಂದ ದೃಢಪಟ್ಟಿದೆ.


