ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ನವಜಾತ ಹೆಣ್ಣು ಶಿಶುವನ್ನು ಪಾಪಿಗಳು ರಸ್ತೆ ಬದಿ ಎಸೆದು ಹೋಗಿರುವುದು ಪತ್ತೆಯಾಗಿದೆ. ಜನಿಸಿದ ಕೆಲವೇ ಗಂಟೆಗಳಲ್ಲಿ ಹೆಣ್ಣು ಶಿಶು ಬೀದಿಪಾಲಾಗಿದೆ.
ದುರುಳರು ಕಪ್ಪು ಬಣ್ಣದ ಬಟ್ಟೆಯಲ್ಲಿ ಕಟ್ಟಿ ಮಗುವನ್ನು ಪೊದೆಗೆ ಎಸೆದು ಹೋಗಿರುವುದು ಹೊಸಕೋಟೆ ನಗರದ ದೊಡ್ಡಕೆರೆ ಏರಿ ಬಳಿ ನಡೆದಿದೆ. ಸ್ಥಳೀಯರಿಂದ ಮಾಹಿತಿ ಲಭಿಸಿದ್ದರಿಂದ ಹೊಸಕೋಟೆ ಪೊಲೀಸರು ಸ್ಥಳಕ್ಕೆ ಬಂದು ಪರಿಶಿಲನೆ ನಡೆಸಿದ್ದಾರೆ. ಮಗುವಿನ ಹೊಕ್ಕುಳ ಬಳ್ಳಿ ಹಾಗೆಯೇ ಇತ್ತು, ಪೊದೆಯಲ್ಲಿ ಇದ್ದ ಶಿಶುವಿನ ಮೈ ಪೂರ್ತಿ ಇರುವೆಗಳು ಕಚ್ಚಿದ್ದು, ಎಸೆದು ಹೋದ ಕೆಲವೇ ಗಂಟೆಗಳಲ್ಲಿ ಪ್ರಾಣ ಬಿಟ್ಟಿರುವ ಸಾಧ್ಯತೆ ಇದೆ.
ಮಗುವಿನ ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಮಗುವಿನ ತಾಯಿ ಹಾಗೂ ಈ ಕೃತ್ಯ ಎಸಗಿದವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.


