ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆ ಸುರಕ್ಷತಾ ಕ್ರಮಗಳ ಭಾಗವಾಗಿ ಬೆಂಗಳೂರು ನಗರದಲ್ಲಿ ಡಿಸೆಂಬರ್ 31 ರಂದು ರಾತ್ರಿ 10 ಗಂಟೆಯ ನಂತರ 50 ಫ್ಲೈಓವರ್ಗಳನ್ನು ಬಂದ್ ಮಾಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಡ್ರಂಕ್ ಅಂಡ್ ಡ್ರೈವ್ ತಪಾಸಣೆ, ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಇಪ್ಪತ್ತು ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗುತ್ತದೆ. ನಗರದಲ್ಲಿ 166 ಕಡೆ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ನಡೆಸಲಾಗುತ್ತದೆ. ವ್ಹೀಲಿಂಗ್ ಹಾಗೂ ಅಪಾಯಕಾರಿ ಸ್ಟಂಟ್ ಮಾಡುವವರ ವಿರುದ್ಧ ಕಠಿಣ ನಿಗಾ ವಹಿಸಲಾಗಿದ್ದು, 92 ಸ್ಥಳಗಳನ್ನು ಗುರುತಿಸಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಡಿಸೆಂಬರ್ 31ರಂದು ರಾತ್ರಿ 10 ಗಂಟೆಯ ನಂತರ ಎಂಜಿ ರಸ್ತೆ ಮೆಟ್ರೋ ನಿಲ್ದಾಣವನ್ನು ಬಂದ್ ಮಾಡಲಾಗುತ್ತದೆ. ಮದ್ಯಪಾನ ಮಾಡಿ ಸಾರ್ವಜನಿಕವಾಗಿ ಕಿರಿಕಿರಿ ಮಾಡುವುದು, ಗಲಾಟೆ ಅಥವಾ ಅಶಾಂತಿ ಸೃಷ್ಟಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪಬ್, ರೆಸ್ಟೋರೆಂಟ್, ಕ್ಲಬ್ ಹಾಗೂ ರೆಸಾರ್ಟ್ಗಳಿಗೆ ಸಮಯ ಮಿತಿ ಕಡ್ಡಾಯಗೊಳಿಸಲಾಗಿದ್ದು, ಡಿಜೆ ಹಾಗೂ ಲೌಡ್ಸ್ಪೀಕರ್ ಬಳಕೆಗೆ ಅನುಮತಿ ಮತ್ತು ಸಮಯ ಮಿತಿ ವಿಧಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಶ್ಲೀಲ ವರ್ತನೆ, ಶಬ್ದ ಮಾಲಿನ್ಯ, ಅಕ್ರಮ ಪಾರ್ಟಿಗಳು ಹಾಗೂ ಅಪಾಯಕಾರಿ ಚಟು ವಟಿಕೆಗಳನ್ನು ನಿಷೇಧಿಸಲಾಗಿದೆ. ಸಿಸಿಟಿವಿ, ಡ್ರೋನ್ ಹಾಗೂ ತಾಂತ್ರಿಕ ಸಾಧನಗಳ ಮೂಲಕ ನಿಗಾವಹಿಸಲಾಗಿದೆ.
ಭದ್ರತೆಗಾಗಿ ಬೆಂಗಳೂರು ನಗರದ ಹಲವೆಡೆ ವಾಚ್ ಟವರ್ ಅಳವಡಿಸಲಾಗಿದೆ. ಸಹಾಯ, ದೂರುಗಳಿಗಾಗಿ ಮಹಿಳಾ ಸಹಾಯ ಕೇಂದ್ರಗಳ ಸ್ಥಾಪನೆ ಮಾಡಲಾಗುತ್ತಿದೆ. ಜನಸಂದಣಿ ನಿಯಂತ್ರಣಕ್ಕೆ ಮೆಟ್ರೋ ರೈಲುಗಳ ಸಂಚಾರ ಅವಧಿ ವಿಸ್ತರಣೆ, ಬಸ್ ಸೇವೆಗಳ ಂಚಾರ ಅವಧಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸಮಾಜ ವಿರೋಧಿ ಶಕ್ತಿಗಳ ತಡೆಗೆ ಎಐ ಕ್ಯಾಮರಾಗಳ ಬಳಕೆ ಮಾಡಲಾಗುವುದು. ಕ್ಯೂಆರ್ಟಿ, ಚೆನ್ನಮ್ಮ ಪಡೆ ಸೇರಿ ವಿಶೇಷ ಪೊಲೀಸ್ ಪಡೆ ನಿಯೋಜನೆ ಮಾಡಲಾಗುತ್ತದೆ.
ಡಿಸೆಂಬರ್ 31ರ ಸಂಜೆ 8 ರಿಂದ ಜನವರಿ 1ರ ಬೆಳಗ್ಗೆವರೆಗೆ ಪೊಲೀಸರು ಪ್ರಮುಖ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಹೇರಿದ್ದಾರೆ. ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ಹಲವು ಕಡೆ ವಾಹನ ಸಂಚಾರ ನಿಷೇಧಿಸಲಾದೆ. ಡಿಸೆಂಬರ್ 31ರ ರಾತ್ರಿ 8 ಗಂಟೆಯಿಂದ ಜನವರಿ 1ರ ಮಧ್ಯರಾತ್ರಿ 02 ಗಂಟೆಯವರೆಗೆ ಪೊಲೀಸ್ ಹಾಗೂ ಕರ್ತವ್ಯ ನಿರತ ತುರ್ತು ಸೇವಾ ವಾಹನಗಳನ್ನು ಹೊರತು ಪಡಿಸಿ ಇತರ ಎಲ್ಲಾ ವಾಹನಗಳ ಸಂಚಾರವನ್ನು ಕೆಲವು ರಸ್ತೆಗಳಲ್ಲಿ ನಿಷೇಧಿಸಲಾಗಿದೆ.
ವಾಹನ ಸಂಚಾರ ನಿಷೇಧಿತತ ರಸ್ತೆಗಳು
ಎಂ.ಜಿ ರಸ್ತೆ: ಅನಿಲ್ ಕುಂಬ್ಳೆ ವೃತ್ತದಿಂದ ಮೆಯೋ ಹಾಲ್ ಬಳಿಯ ರೆಸಿಡೆನ್ಸಿ ರಸ್ತೆ ಜಂಕ್ಷನ್ . ಬ್ರಿಗೇಡ್ ರಸ್ತೆ: ಕಾವೇರಿ ಎಂಪೋರಿಯಂ ಜಂಕ್ಷನ್ನಿಂದ ಓಪೇರಾ ಜಂಕ್ಷನ್. ಚರ್ಚ್ ಸ್ಟ್ರೀಟ್: ಬ್ರಿಗೇಡ್ ರಸ್ತೆ ಜಂಕ್ಷನ್ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್. ರೆಸಿಡೆನ್ಸಿ ರಸ್ತೆ: ಆಶೀರ್ವಾದಮ್ ಜಂಕ್ಷನ್ನಿಂದ ಮೆಯೋ ಹಾಲ್ ಜಂಕ್ಷನ್. ಮ್ಯೂಸಿಯಂ ರಸ್ತೆ: ಎಂ.ಜಿ ರಸ್ತೆ ಜಂಕ್ಷನ್ನಿಂದ ಹಳೇ ಮದ್ರಾಸ್ ಬ್ಯಾಂಕ್ ರಸ್ತೆ (ಎಸ್.ಬಿ.ಐ ವೃತ್ತ). ರೆಸ್ಟ್ ಹೌಸ್ ರಸ್ತೆ: ಮ್ಯೂಸಿಯಂ ರಸ್ತೆ ಜಂಕ್ಷನ್ನಿಂದ ಬ್ರಿಗೇಡ್ ರಸ್ತೆ ಜಂಕ್ಷನ್. ರೆಸಿಡೆನ್ಸಿ ಕ್ರಾಸ್ ರಸ್ತೆ: ರೆಸಿಡೆನ್ಸಿ ರಸ್ತೆ ಜಂಕ್ಷನ್ನಿಂದ ಎಂ.ಜಿ ರಸ್ತೆ ಜಂಕ್ಷನ್ (ಶಂಕರ್ ನಾಗ್ ಚಿತ್ರಮಂದಿರದವರೆಗೆ).
ಡಿಸೆಂಬರ್ 31ರ ರಾತ್ರಿ 08 ಗಂಟೆಯ ನಂತರ ಕ್ವೀನ್ಸ್ ವೃತ್ತದಿಂದ ಹಲಸೂರು ಕಡೆಗೆ ಹೋಗುವ ವಾಹನಗಳು ಅನಿಲ್ ಕುಂಬ್ಳೆ ವೃತ್ತದಲ್ಲಿ ಎಡ ತಿರುವು ಪಡೆದು ಸೆಂಟ್ರಲ್ ಸ್ಟ್ರೀಟ್ – ಬಿ.ಆರ್.ವಿ ಜಂಕ್ಷನ್ – ಕಬ್ಬನ್ ರಸ್ತೆ ಮೂಲಕ ವೆಬ್ಸ್ ಜಂಕ್ಷನ್ ಬಳಿ ಎಂ.ಜಿ ರಸ್ತೆಯನ್ನು ಸೇರಬಹುದು
ಹಲಸೂರಿನಿಂದ ಕಂಟೋನ್ಮೆಂಟ್ ಕಡೆಗೆ ಹೋಗುವ ವಾಹನಗಳು ಟ್ರಿನಿಟಿ ವೃತ್ತದಲ್ಲಿ ಬಲ ತಿರುವು ಪಡೆದು ಹಲಸೂರು ರಸ್ತೆ – ಡಿಕನ್ಸನ್ ರಸ್ತೆ ಮೂಲಕ ಕಬ್ಬನ್ ರಸ್ತೆ ಸೇರಬೇಕು. ಕಾಮರಾಜ್ ರಸ್ತೆ: ಕಬ್ಬನ್ ರಸ್ತೆ ಜಂಕ್ಷನ್ನಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್ ವರೆಗೆ ವಾಹನ ನಿಲುಗಡೆಗೆ ಅವಕಾಶವಿರುತ್ತದೆ.
ಈಜಿಪುರ ಕಡೆಯಿಂದ ಬರುವ ವಾಹನಗಳು ಇಂಡಿಯಾ ಗ್ಯಾರೇಜ್ ಬಳಿ ಬಲ ತಿರುವು ಪಡೆದು ಎ.ಎಸ್.ಸಿ ಸೆಂಟರ್ನಲ್ಲಿ ಎಡ ತಿರುವು ಪಡೆದು ಟ್ರಿನಿಟಿ ಮೂಲಕ ಸಾಗಬೇಕು. ಹೆಚ್.ಎ.ಎಲ್ ಕಡೆಯಿಂದ ಬರುವ ವಾಹನಗಳು ಎ.ಎಸ್.ಸಿ ಸೆಂಟರ್ನಲ್ಲಿ ಬಲ ತಿರುವು ಪಡೆದು ಟ್ರಿನಿಟಿ ಮೂಲಕ ಸಂಚರಿಸಬೇಕು.
ಪಾದಚಾರಿಗಳು ಬ್ರಿಗೇಡ್ ರಸ್ತೆಯಲ್ಲಿ ಎಂ.ಜಿ ರಸ್ತೆ ಜಂಕ್ಷನ್ನಿಂದ ಓಪೇರಾ ಜಂಕ್ಷನ್ ಕಡೆಗೆ ಮಾತ್ರ ಕಾಲ್ನಡಿಗೆಯಲ್ಲಿ ಸಾಗಬೇಕು, ವಿರುದ್ಧ ದಿಕ್ಕಿನಲ್ಲಿ ಸಂಚರಿಸಲು ಅವಕಾಶವಿಲ್ಲ. ಶಿವಾಜಿನಗರ ಬಿ.ಎಂ.ಟಿ.ಸಿ ಶಾಪಿಂಗ್ ಕಾಂಪ್ಲೆಕ್ಸ್ – 1ನೇ ಮಹಡಿ, ಯು.ಬಿ. ಸಿಟಿ, ಗರುಡಾ ಮಾಲ್, ಕಾಮರಾಜ್ ರಸ್ತೆ (ಕಬ್ಬನ್ ರಸ್ತೆ ಜಂಕ್ಷನ್ನಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್ ವರೆಗೆ) ಸ್ಥಳಗಳಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.


