Monday, September 01, 2025
Menu

ಹೊಸ ಜಿಎಸ್‌ಟಿ ಜನಕ್ಕೆ ಲಾಭ, ರಾಜ್ಯ ಸರ್ಕಾರಗಳಿಗೆ ನಷ್ಟ

ಕೇಂದ್ರ ಸರ್ಕಾರ ಘೋಷಿಸಿರುವ ಹೊಸ ಜಿಎಸ್‌ಟಿ ದರ ಜನಸಾಮಾನ್ಯರಿಗೆ ಅನುಕೂಲವಾಗುತ್ತಿದ್ದರೆ ರಾಜ್ಯ ಸರ್ಕಾರಗಳಿಗೆ ಶೇ.೧೫-೨೦ ರಷ್ಟು ಆದಾಯ ಖೋತ ಆಗಲಿದೆ. ಇದಕ್ಕಾಗಿ ಹಿಂದೆ ಇದ್ದ ಜಿಎಸ್‌ಟಿ ನಷ್ಟ ಪರಿಹಾರವನ್ನು ಮುಂದುವರಿಸಬೇಕೆಂದು ಕರ್ನಾಟಕವೂ ಸೇರಿದಂತೆ ಬಿಜೆಪಿ ಹೊರತುಪಡಿಸಿ ಆಡಳಿತದಲ್ಲಿರುವ ಪಕ್ಷಗಳು ಸಭೆ ಸೇರಿ ಕೇಂದ್ರವನ್ನು ಒತ್ತಾಯಪಡಿಸಿದೆ.

ಕೇಂದ್ರ ಸರ್ಕಾರ೨೦೧೭ ರಲ್ಲಿ ಜಿಎಸ್‌ಟಿ ತೆರಿಗೆ ಪದ್ಧತಿಯನ್ನು ಜಾರಿಗೆ ತಂದಿತು. ಆಗ ರಾಜ್ಯಗಳಿಗಿದ್ದ ತೆರಿಗೆ ವಿಧಿಸುವ ಅಧಿಕಾರವನ್ನು ಕಸಿದುಕೊಂಡು ಜಿಎಸ್‌ಟಿ ಮಂಡಳಿಗೆ ನೀಡಿತು. ಇದರಿಂದ ರಾಜ್ಯಗಳಿಗಾದ ನಷ್ಟ ತುಂಬಿಕೊಡಲು ಕೇಂದ್ರ ಒಪ್ಪಿತು. ಅದರಂತೆ ವಿಲಾಸಿ ತೆರಿಗೆ ಮತ್ತು ತಂಬಾಕು ಉತ್ಪನ್ನಗಳ ಮೇಲಿದ್ದ ತೆರಿಗೆಯನ್ನು ಹಾಗೆ ಉಳಿಸಿಕೊಂಡಿತು.ಇದರಿಂದ ಜಿಎಸ್‌ಟಿ ಪರಿಹಾರ ನೀಡಲಾಗುತ್ತಿದೆ. ಜಿಎಸ್‌ಟಿಗೆ ಮುನ್ನ ತೆರಿಗೆ ಆದಾಯ ಶೇ೧೪ ರಂತೆ ಅಧಿಕಗೊಳ್ಳುತ್ತಿತ್ತು ಎಂಬ ಲೆಕ್ಕಾಚಾರದಂತೆ ಪರಿಹಾರ ನೀಡುತ್ತ ಬಂದಿದೆ. ಇದು ೨೦೨೨ಕ್ಕೆ ಮುಕ್ತಾಯಗೊಳ್ಳಬೇಕಿತ್ತು. ಆದರೂ ಮುಂದುವರಿಸಲು ಕೇಂದ್ರ ಒಪ್ಪಿತು. ಈಗ ಜಿಎಸ್‌ಟಿ ದರವನ್ನು ಶೇ.೫ ಮತ್ತು ಶೇ.೧೮ಕ್ಕೆ ಇಳಿಸಿದಾಗ ರಾಜ್ಯಗಳ ಆದಾಯಕ್ಕೆ ಮತ್ತೆ ಹೊಡೆತ ಬೀಳಲಿದೆ.

ಕರ್ನಾಟಕದಲ್ಲಿ ತೆರಿಗೆಗಳಿಂದ ಜಿಎಸ್‌ಟಿಗೆ ಮುನ್ನ ೫೩ ಸಾವಿರ ಕೋಟಿ ರೂ. ಬರುತ್ತಿತ್ತು. ಈಗ ಜಿಎಸ್‌ಟಿಯಿಂದ ೧.೨ಲಕ್ಷ ಕೋಟಿ ರೂ. ಬರುತ್ತಿದೆ. ಈಗ ಜಿಎಸ್‌ಟಿ ದರವನ್ನು ಕಡಿಮೆ ಮಾಡಿದರೆ ೧೫ ಸಾವಿರ ಕೋಟಿ ರೂ. ನಷ್ಟ ಸಂಭವಿಸಲಿದೆ. ಇದಕ್ಕೆ ಪರಿಹಾರ ನೀಡಬೇಕೆಂದು ರಾಜ್ಯ ಸರ್ಕಾರ ಒತ್ತಾಯಿಸಿದೆ. ಇದನ್ನು ಜಿಎಸ್‌ಟಿ ಮಂಡಳಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದೆ. ಹೊಸ ತೆರಿಗೆ ಪದ್ಧತಿಯಿಂದ ಜನ ಸಾಮಾನ್ಯರಿಗೆ ಅನುಕೂಲವಾಗಲಿದೆ. ದಿನನಿತ್ಯ ಬಳಕೆ ವಸ್ತುಗಳ ಬೆಲೆ ಇಳಿಯಲಿದೆ. ಅದೇರೀತಿ ಬೃಹತ್ ಕಂಪನಿಗಳಿಗೂ ಜಿಎಸ್‌ಟಿ ದರ ಇಳಿಕೆ ಲಾಭ ಲಭಿಸಲಿದೆ. ಮೊದಲಿನಿಂದಲೂ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳ ಆಡಳಿತ ಇರುವ ರಾಜ್ಯಗಳು ಕೇಂದ್ರದ ವಿರುದ್ಧ ಕಿಡಿಕಾರುವುದನ್ನು ಮುಂದುವರಿಸಿದೆ. ಆದರೆ ಜಿಎಸ್‌ಟಿ ಬಂದ ಮೇಲೆ ಎಲ್ಲ ಸರ್ಕಾರಗಳ ಆದಾಯ ಅಧಿಕಗೊಂಡಿರುವುದಂತೂ ನಿಜ. ಜನರಿಗೆ ಕಿರುಕುಳ ತಪ್ಪಿದೆ. ಸರ್ಕಾರ ತೆರಿಗೆ ಹಣ ಸುಲಭವಾಗಿ ಬರುತ್ತಿದೆ.ಹಿಂದೆ ರಾಜ್ಯ-ರಾಜ್ಯಗಳ ನಡುವೆ ಇದ್ದ ವ್ಯಾಪಾರ ಪೈಪೋಟಿ ಈಗ ಇಲ್ಲ. ಎಲ್ಲೇ ಮಾರಾಟ ಮಾಡಿದರೂ ತೆರಿಗೆ ಒಂದೇ ಇರುವುದರಿಂದ ವಸ್ತುವಿನ ಗುಣಮಟ್ಟದ ಮೇಲೆ ಮಾರಾಟದ ಬೆಲೆ ವ್ಯತ್ಯಾಸವಾಗುತ್ತದೆ. ಅದರಲ್ಲೂ ಡಿಜಿಟಲ್ ಹಣಕಾಸು ಬಂದ ಮೇಲೆ ತೆರಿಗೆ ಪಾವತಿ ಸುಲಭವಾಗಿದೆ.

ಜಿಡಿಪಿ ಬೆಳವಣಿಗೆ ಕಾಣಲು ಜಿಎಸ್‌ಟಿ ಕೂಡ ಒಂದು ಎಂಬುದನ್ನು ಮರೆಯುವಂತಿಲ್ಲ. ತೆರಿಗೆಪದ್ಧತಿ ಸುಲಭವಾಗಿದ್ದಲ್ಲಿ ಜನ ಸಾಮಾನ್ಯರು ತೆರಿಗೆ ಪಾವತಿಸಲು ಹಿಂಜರಿಯುವುದಿಲ್ಲ. ಅದರಿಂದ ಪ್ರತಿ ವರ್ಷ ತೆರಿಗೆ ಸಂಗ್ರಹ ಅಧಿಕಗೊಳ್ಳುತ್ತಿದೆ. ಈಗ ಇರುವ ಸಮಸ್ಯೆ ಎಂದರೆ ಕೇಂದ್ರ ಸರ್ಕಾರ ರಾಜ್ಯಗಳ ಪಾಲನ್ನು ಸರಿಯಾಗಿ ಹಂಚುತ್ತಿಲ್ಲ ಎಂಬುದೇ ಆಗಿದೆ. ರಾಜ್ಯಗಳು ಶೇ.೫೦ ರಷ್ಟು ತಮಗೆ ನೀಡಬೇಕೆಂದು ಕೇಳುತ್ತಿವೆ. ಈಗ ಶೇ.೪೧ ಇದೆ. ಅದನ್ನು ಒಮ್ಮೆಲೆ ಶೇ.೫೦ಕ್ಕೆ ಹೆಚ್ಚಿಸಲು ಕೇಂದ್ರ ಹಣಕಾಸು ಆಯೋಗ ಒಪ್ಪುತ್ತಿಲ್ಲ. ಪ್ರಧಾನಿ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಗಳಿಗೆ ಹೆಚ್ಚಿನ ಪಾಲು ಬೇಕು ಎಂದು ವಾದಿಸುತ್ತಿದ್ದರು. ಈಗ ರಾಜ್ಯಗಳ ಪಾಲು ಹೆಚ್ಚಿಸಲು ಒಪ್ಪುತ್ತಿಲ್ಲ. ಅದರಲ್ಲೂ ಬಿಜೆಪಿ ಆಡಳಿತವಿಲ್ಲದ ರಾಜ್ಯಗಳ ಆರ್ಥಿಕ ಸಬಲೀಕರಣ ನಡೆಯುತ್ತಿಲ್ಲ. ರಾಜ್ಯಗಳ ಆರ್ಥಿಕ ಸಂಪನ್ಮೂಲ ಕಡಿಮೆ ಇರುವುದರಿಂದ ಹೊಸ ಯೋಜನೆಗಳನ್ನು ಕೈಗೊಳ್ಳಲು ಹಣ ಇರುವುದಿಲ್ಲ. ಇದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರ ತನ್ನ ಪಾಲಿನ ಹಣದಲ್ಲಿ ಬೃಹತ್ ಯೋಜನೆಗಳನ್ನು ಕೈಗೊಳ್ಳುತ್ತಿದೆ. ಇದರಿಂದ ಜನರಿಗೆ ಕೇಂದ್ರದ ಯೋಜನೆಗಳು ಕಣ್ಣಿಗೆ ಕಾಣುವುದು ಸಹಜ. ರಾಜ್ಯ ಸರ್ಕಾರ ತನ್ನ ಅಸಹಾಯಕತೆಯನ್ನು ತೋರಿಸಿಕೊಳ್ಳದೆ ಕೇಂದ್ರದ ವಿರುದ್ಧ ಕಿಡಿ ಕಾರುವುದನ್ನು ಬಿಟ್ಟರೆ ಬೇರೆ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಜಿಎಸ್‌ಟಿ ಮಂಡಳಿ ಮತ್ತು ಕೇಂದ್ರ ಹಣಕಾಸು ಆಯೋಗ ಪರಿಹಾರ ಸೂಚಿಸಬೇಕು.

Related Posts

Leave a Reply

Your email address will not be published. Required fields are marked *