ಬೆಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಪರ್ಯಾಯ ಇಂಧನ ವ್ಯವಸ್ಥೆಯನ್ನು ಪ್ರೋತ್ಸಾಹಿಸುವ ಸಲುವಾಗಿ ನೂತನ ಜೈವಿಕ ಇಂಧನ ನೀತಿಯನ್ನು ಜಾರಿಗೆ ತರಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ನಡೆದ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ 10 ನೇ ವಾರ್ಷಿಕ ಸರ್ವ ಸದಸ್ಯ ಸಮಿತಿ ಸಭೆಯ ನಂತರ ಸಚಿವರು ಜೈವಿಕ ಇಂಧನ ನೀತಿಯ ಬಗ್ಗೆ ಮಾಹಿತಿ ನೀಡಿ, ಈ ಸಂಬಂಧ ಈಗಾಗಲೇ ಕೆಲವು ಪೂರ್ವ ಸಿದ್ಧತಾ ಕಾರ್ಯಯೋಜನೆಗಳನ್ನು ಕೈಗೊಳ್ಳಲಾಗಿದೆ, ರಾಜ್ಯದಲ್ಲಿ ಹಾಗೂ ಇತರ ರಾಜ್ಯಗಳಿಗೆ ಭೇಟಿ ನೀಡಿ ಜೈವಿಕ ಇಂಧನ ಕಾರ್ಯಯೋಜನೆಗಳ ಅನುಷ್ಟಾನ ಪ್ರಕ್ರಿಯೆ ಹಾಗೂ ವಸ್ತುಸ್ಥಿತಿ ಅಧ್ಯಯನ ಮಾಡಲಾಗಿದೆ, ಇದರೊಂದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜೈವಿಕ ಇಂಧನ ನೀತಿಗಳ ವಿಶ್ಲೇಷಣೆ ಮಾಡಲಾಗಿದೆ ಎಂದು ಹೇಳಿದರು.
ಜೈವಿಕ ಇಂಧನ ಸಂಪನ್ಮೂಲಗಳ ಲಭ್ಯತೆ, ಕ್ರೋಢಿಕರಣ ಕುರಿತು ಪರಿಶೀಲನೆ ಮಾಡಲಾಗಿದ್ದು, ನೂತನ ಕರ್ನಾಟಕ ರಾಜ್ಯ ಜೈವಿಕ ಇಂಧನ ರಚನೆ ಕುರಿತು ಪ್ರಕ್ರಿಯೆ ಆರಂಭಿಸಲಾಗಿದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದು ರಾಜ್ಯದಲ್ಲಿ ಜೈವಿಕ ಇಂಧನ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಪೂರಕ ವಾತಾವರಣ ನಿರ್ಮಾಣ ಮಾಡುವ ಕುರಿತು ಸಮ್ಮೇಳನಗಳು, ಕಾರ್ಯಗಾರಗಳು, ವಸ್ತು ಪ್ರದರ್ಶನಗಳು ಹಾಗೂ ಹೂಡಿಕೆದಾರರ ಸಮಾವೇಶಗಳಲ್ಲಿ ಭಾಗವಹಿಸಿ ಮಾಹಿತಿ ಸಂಗ್ರಸಲಾಗಿದೆ ಹಾಗೂ ಮಂಡಳಿಗೆ ಕೈಗಾರಿಕಾ ಸಂಘಟನೆಗಳು, ಸಂಸ್ಥೆಗಳು, ವಿದೇಶದ ವಿಶ್ವವಿದ್ಯಾಲಯಗಳು ಮುಂತಾದ ಸಂಸ್ಥೆಗಳ ಪ್ರತಿನಿಧಿಗಳನ್ನು ಆಹ್ವಾನಿಸಿ ಚರ್ಚಿಸಲಾಗಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ರಾಜ್ಯದಲ್ಲಿನ ಜೈವಿಕ ಇಂಧನ ಬಯೋಬ್ರಿಕೆಟ್ಸ್, ಬಯೋಪಿಲೆಟ್ಸ್, ಬಯೋಚಾರ್, ಬಯೋಕೋಲ್. ಬಯೋಡೀಸೆಲ್, 2ಜಿ ಎಥನಾಲ್, ಗ್ರೀನ್ ಹೈಡ್ರೋಜನ್ ಕಾರ್ಯಯೋಜನೆಗಳಲ್ಲಿ ನಿರತರಾಗಿರುವ ಉದ್ದಿಮೆದಾರರುಗಳ ವಿಚಾರ ವಿನಿಮಯ ಸಭೆಯನ್ನು ತುಮಕೂರು ಹಾಗೂ ಬೆಂಗಳೂರು ಗಳಲ್ಲಿಆಯೋಜಿಸಲಾಗಿದ್ದು ಮಾಹಿತ ಸಂಗ್ರಹಿಸಲಾಗಿದೆ, ಶೀಘ್ರದಲ್ಲೇ ನೀತಿಯ ಕರಡು ಸಿದ್ಧಪಡಿಸಿ ಸಾರ್ವಜನಿಕರ ಅಭಿಪ್ರಾಯಕ್ಕಾಗಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಕೃಷಿ ಸಚಿವ ಚೆಲುರಾಯಸ್ವಾಮಿ, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸುಧೀಂದ್ರ ಎಸ್.ಇ.ಸುಧೀಂದ್ರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿ ಸಮೀರ್ ಶುಕ್ಲಾ, ಆಯುಕ್ತೆ ಅರುಂಧತಿ ಚಂದ್ರಶೇಖರ್ ಹಾಗೂ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.