ಕ್ಷುಲಕ ಕಾರಣಕ್ಕೆ ನಡೆದ ಜಗಳದ ಹಿನ್ನೆಲೆಯಲ್ಲಿ ತಾಯಿಗೆ ಬುದ್ದಿ ಕಲಿಸಲು ಆಕೆಯ 6 ವರ್ಷದ ಮಗಳನ್ನು ಬರ್ಬರವಾಗಿ ಕೊಂದು ಶವವನ್ನು ಚರಂಡಿಗೆ ಎಸೆದ ವಿಕೃತ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ವೈಟ್‌ಫೀಲ್ಡ್ ಸಮೀಪದ ನಲ್ಲೂರಳ್ಳಿಯಲ್ಲಿ ಮಂಗಳವಾರ ನೆರೆಹೊರೆಯವರ ನಡುವಿನ ದ್ವೇಷಕ್ಕೆ ಪಶ್ಚಿಮ ಬಂಗಾಳ ಮೂಲದ ಶಹಜಾನ್ ಕತೂನ್ (6) ಬಲಿಯಾಗಿದ್ದಾಳೆ.
ನಲ್ಲೂರಳ್ಳಿಯಲ್ಲಿ ವಾಸವಾಗಿದ್ದ ಪಶ್ಚಿಮ ಬಂಗಾಳದ ಕೊಲ್ಕತ್ತಾ ಮೂಲದ ಕುಟುಂಬ ಹಾಗೂ ಅಕ್ಕಪಕ್ಕದ ಮನೆಯವರಿಗೂ ಸಣ್ಣಪುಟ್ಟ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ಇತ್ತೀಚೆಗೆ ನಡೆದ ಜಗಳದಿಂದ ಮಗುವಿನ ತಾಯಿಗೆ ‘ಬುದ್ಧಿ ಕಲಿಸಬೇಕು’ ಎಂದು ಪಣತೊಟ್ಟ ಆರೋಪಿ, ಮಗುವನ್ನು ಕೊಲೆ ಮಾಡಿದ್ದಾನೆ.
ಬಾಲಕಿ ಶಹಜಾನ್ ಕತೂನ್ ಒಬ್ಬಳೇ ಇದ್ದ ಸಮಯ ನೋಡಿ ಹೊಂಚು ಹಾಕಿದ ಆರೋಪಿ ಆಕೆಯನ್ನು ಅಪಹರಿಸಿ ಕುತ್ತಿಗೆ ಹಿಸುಕಿ ಬರ್ಬರವಾಗಿ ಕೊಲೆ ಮಾಡಿ ಮಗುವಿನ ಶವವನ್ನು ಬ್ಯಾಗ್ ಒಂದರಲ್ಲಿ ತುಂಬಿ, ಯಾರಿಗೂ ಅನುಮಾನ ಬರದಂತೆ ಸಮೀಪದ ಚರಂಡಿಗೆ ಎಸೆದು ಪರಾರಿಯಾಗಿದ್ದಾನೆ.
ಚರಂಡಿಯಲ್ಲಿ ಶವ ಪತ್ತೆ
ಮಗು ಕಾಣೆಯಾದ ಬಗ್ಗೆ ಪೋಷಕರು ಗಾಬರಿಗೊಂಡು ಹುಡುಕಾಡಿದಾಗ ಮಗುವಿನ ಶವ ಚರಂಡಿಯಲ್ಲಿ ಪತ್ತೆಯಾಗಿದೆ.ಮಾಹಿತಿ ನೀಡಿದ ತಕ್ಷಣವೇ ವೈಟ್‌ಫೀಲ್ಡ್ ಪೊಲೀಸರು, ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಾಗಿದ್ದು, ಮಗುವಿನ ತಾಯಿಯ ಜೊತೆ ಜಗಳವಾಡಿದ್ದ ವ್ಯಕ್ತಿಯೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ತನ್ನ ತಾಯಿ ಯಾರ ಜೊತೆ ಜಗಳವಾಡಿದ್ದಾಳೆ ಎಂಬ ಅರಿವಿಲ್ಲದ ಹಸುಳೆಯನ್ನು ಇಷ್ಟು ಕ್ರೂರವಾಗಿ ಕೊಂದ ಆರೋಪಿಗಾಗಿ ವೈಟ್‌ಫೀಲ್ಡ್ ಪೊಲೀಸರು ಬಲೆ ಬೀಸಿದ್ದಾರೆ.
ಈ ಸಂಬಂಧ ವೈಟ್‌ಫೀಲ್ಡ್ ಡಿಸಿಪಿ ಸೈದುಲಾ ಅಡಾವತ್ ಅವರು ಮಾತನಾಡಿ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಬಾಲಕಿಯನ್ನು ಪ್ಲಾಸ್ಟಿಕ್ ವೈರ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಸಿಸಿಟಿವಿಯಲ್ಲಿ ಪತ್ತೆ
ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ತಮ್ಮ ಮಗು ಕಾಣೆಯಾಗಿರುವ ಬಗ್ಗೆ ಮಂಗಳವಾರ ಮಧ್ಯಾಹ್ನ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರಿನಲ್ಲಿ ಪರಿಚಿತ ವ್ಯಕ್ತಿಯೊಬ್ಬರ ಮೇಲೆ ಅನುಮಾನ ವ್ಯಕ್ತಪಡಿಸಲಾಗಿತ್ತು. ಕೂಡಲೇ ಎಚ್ಚೆತ್ತ ಪೊಲೀಸರು ಪ್ರಕರಣ ದಾಖಲಿಸಿ, ತಾಂತ್ರಿಕ ತಂಡ ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಹುಡುಕಾಟ ಆರಂಭಿಸಿದರು.
ಸಿಸಿಟಿವಿ ಪರಿಶೀಲಿಸಿದಾಗ ಮಗು ತನ್ನ ಕುಟುಂಬಕ್ಕೆ ಪರಿಚಯವಿದ್ದ ವ್ಯಕ್ತಿಯೊಬ್ಬನ ಜೊತೆ ಹೋಗುತ್ತಿರುವುದು ಪತ್ತೆಯಾಗಿತ್ತು. ಇದನ್ನು ಆಧರಿಸಿ ಪೊಲೀಸರು ನಲ್ಲೂರಳ್ಳಿ ಭಾಗದಲ್ಲಿ ತಡರಾತ್ರಿಯವರೆಗೆ ಬೃಹತ್ ಮಟ್ಟದ ‘ಕೂಂಬಿಂಗ್’ ಕಾರ್ಯಾಚರಣೆ ನಡೆಸಿದರು ಎಂದು ಹೇಳಿದರು.
ಲೈಂಗಿಕ ದೌರ್ಜನ್ಯವಿಲ್ಲ:
ಮಗುವಿನ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ಅಥವಾ ದೈಹಿಕ ಹಲ್ಲೆಯ ಗುರುತುಗಳಿಲ್ಲ. ಪ್ಲಾಸ್ಟಿಕ್ ವೈರ್‌ನಿಂದ ಕುತ್ತಿಗೆ ಬಿಗಿದು ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಆರೋಪಿ ಕುಟುಂಬ ಮತ್ತು ಬಾಲಕಿಯ ಕುಟುಂಬದ ನಡುವೆ ಹಳೆಯ ವೈಷಮ್ಯವಿತ್ತು. ಇದೇ ದ್ವೇಷದ ಹಿನ್ನೆಲೆಯಲ್ಲಿ ಮಗುವನ್ನು ಕೊಲೆ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಸಂಶಯಾಸ್ಪದ ವ್ಯಕ್ತಿಯ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿದ್ದು, ಆತನನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಲಾಗಿದೆ. ಪರಿಚಿತನೇ ಮಗುವನ್ನು ಕರೆದೊಯ್ದು ಈ ರೀತಿ ಬರ್ಬರವಾಗಿ ಕೊಲೆ ಮಾಡಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಆರೋಪಿಯ ಬಂಧನಕ್ಕಾಗಿ ಪೊಲೀಸರು ಜಾಲ ಬೀಸಿದ್ದಾರೆ ಎಂದು ತಿಳಿಸಿದರು


