ಓಪಿಎಸ್ (ಓಲ್ಡ್ ಪೆನ್ಷನ್ ಸ್ಕೀಮ್) ಜಾರಿ ಸಂಬಂಧ ಅಂಜುಮ್ ಪರ್ವೇಜ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಆ ಸಮಿತಿಯ ವರದಿಯನ್ನು ಪರಿಶೀಲಿಸಿ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಓಪಿಎಸ್ ಬಗ್ಗೆ ನಾವು ಭರವಸೆ ನೀಡಿದ್ದೆವು. ಅದರಂತೆ ಅದನ್ನು ಜಾರಿಗೆ ತರಲು ಬದ್ದರಾಗಿದ್ದೇವೆ. ನೀವು ಬಿಟ್ಟರೂ ಈ ವಿಚಾರವನ್ನು ನಾವು ಬಿಡುವುದಿಲ್ಲ. ಆದರೆ ಸ್ವಲ್ಪ ತಾಳ್ಮೆಯಿರಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.
ಬೆಂಗಳೂರು ಅರಮನೆ ಮೈದಾನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಸಮಾವೇಶದಲ್ಲಿ ಶಿವಕುಮಾರ್ ಮಾತನಾಡಿದರು. ಓಪಿಎಸ್ ಜಾರಿ ವಿಚಾರವಾಗಿ ಭರವಸೆ ನೀಡಿದಾಗ ನೌಕರರು ಡಿಕೆ, ಡಿಕೆ ಎಂದು ಘೋಷಣೆ ಕೂಗಿದರು. ಆಗ ಸಭಿಕರಿಗೆ ಸುಮ್ಮನಿರಲು ಹೇಳಿದ ಶಿವಕುಮಾರ್ ಹೀಗೆ ಪ್ರತಿಕ್ರಿಯಿಸಿದ್ದಾರೆ.
ಎಂಟತ್ತು ವರ್ಷ ರಾಜಕೀಯ ಬಿಟ್ಟು ಹೋಗುವುದಿಲ್ಲ. ನನ್ನ ಆರೋಗ್ಯ ಇನ್ನೂ ಗಟ್ಟಿಯಾಗಿದೆ: ನಾನು ಮುಂದಿನ ಬಾರಿ ಚುನಾವಣೆಗೆ ನಿಂತಾಗ, ನನ್ನ ನಾಯಕತ್ವದಲ್ಲಿ ನಡೆದಾಗ ದಯವಿಟ್ಟು ಈ ಪದವನ್ನು ಉಪಯೋಗಿಸಿ. ನಾನು ವಿಧಾನಸೌಧದಲ್ಲಿ ಇರುವವನೇ. ನಾನು ಇನ್ನು ಎಂಟತ್ತು ವರ್ಷ ಬಿಟ್ಟು ಹೋಗುವುದಿಲ್ಲ. ನನ್ನ ಆರೋಗ್ಯ ಇನ್ನೂ ಗಟ್ಟಿಯಾಗಿದೆ. ನನ್ನ ಮೇಲೆ ನಂಬಿಕೆಯಿಡಿ ಎಂದು ಡಿಸಿಎಂ ಹೇಳಿದ್ದಾರೆ.
ಸರ್ಕಾರದ ರಥ ಎಳೆಯುವವರು ಸರ್ಕಾರಿ ನೌಕರರು. ನೀವು ಇಲ್ಲದಿದ್ದರೆ ಸರ್ಕಾರದ ಚಕ್ರ ಮುಂದಕ್ಕೆ ಸಾಗುವುದಿಲ್ಲ. ನಿಮ್ಮ ಸಂಘ ರಚನಾತ್ಮಕವಾಗಿ ಕೆಲಸ ಮಾಡುತ್ತಿದೆ. ಸರ್ಕಾರಿ ಕೆಲಸ ಕೇವಲ ಹುದ್ದೆಯಲ್ಲ. ಅದೊಂದು ಜವಾಬ್ದಾರಿ. ನೀವು ಹೃದಯ ಶ್ರೀಮಂತಿಕೆಯಿಂದ ಜವಾಬ್ದಾರಿ ಸರಿಯಾಗಿ ನಿಭಾಯಿಸಬೇಕು ಎಂದರು.
ನಾನು 1989ರಿಂದ ವಿಧಾನಸಭೆಯಲ್ಲಿ ಇದ್ದೇನೆ. ಕಾರ್ಯಾಂಗದ ಭಾಗವಾಗಿ ಸರ್ಕಾರಿ ನೌಕರರು ನೀವೀದ್ದೀರಿ. ನಿಮ್ಮ ಜವಾಬ್ದಾರಿ ನನಗೆ ಅರಿವಿದೆ. ಪ್ರಜಾಪ್ರಭುತ್ವ, ಸಂವಿಧಾನದ ವ್ಯವಸ್ಥೆಯಲ್ಲಿ ಸರ್ಕಾರಿ ನೌಕರರು ಸರ್ಕಾರ ಹಾಗೂ ಜನರ ಮಧ್ಯೆ ಸಂಪರ್ಕ ಸೇತುವೆಯಂತೆ ಇದ್ದಾರೆ. ಜನ ದೇವಾಲಯಕ್ಕೆ ತಮ್ಮ ಕಷ್ಟ ಹೇಳಿಕೊಳ್ಳಲು ಹೋಗುವಂತೆ ಜನ ತಮ್ಮ ಸಮಸ್ಯೆಯನ್ನು ಹೊತ್ತು ನಿಮ್ಮ ಬಳಿಗೆ ಬರುತ್ತಾರೆ ಎಂದು ತಿಳಿಸಿದರು.
ಮಗುವಿಗೆ ತಾಯಿಯ ಮೇಲೆ ನಂಬಿಕೆ, ಮರಕ್ಕೆ ತನ್ನ ಬೇರಿನ ಮೇಲೆ ನಂಬಿಕೆ. ಪೋಷಕರಿಗೆ ತಮ್ಮ ಮಕ್ಕಳ ಮೇಲೆ ನಂಬಿಕೆ, ಭಕ್ತನಿಗೆ ಭಗವಂತನ ಮೇಲೆ ನಂಬಿಕೆ. ಈ ಸರ್ಕಾರದ ಅಭಿವೃದ್ಧಿ ವಿಚಾರದಲ್ಲಿ ನನಗೆ ಸರ್ಕಾರಿ ನೌಕರರ ಮೇಲೆ ನಂಬಿಕೆ ಇದೆ. ಮನುಷ್ಯನಿಗೆ ನಂಬಿಕೆಗಿಂತ ದೊಡ್ಡ ಗುಣವಿಲ್ಲ. ಅದೇ ರೀತಿ ನಿಮ್ಮೆಲ್ಲರ ನಂಬಿಕೆಯನ್ನು ನಿಮ್ಮ ಸಂಘದ ಅಧ್ಯಕ್ಷ ಷಡಕ್ಷರಿ ಉಳಿಸಿಕೊಳ್ಳುತ್ತಾರೆ ಎಂದು ಭಾವಿಸಿದ್ದೇನೆ. ನಾನು ಕೂಡ ನೌಕರನಂತೆ 38 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಶಾಸಕನಾಗಿ ಸರ್ಕಾರದ ವೇತನ ಪಡೆದಿದ್ದೇನೆ. ನನಗೂ ಪಿಂಚಣಿ ಬರುತ್ತದೆ ಎಂದು ಹೇಳಿದರು.
ಸಮಾಜ ಸದಾ ಸೇವೆ ಮಾಡುವವರನ್ನು ಗುರುತಿಸುತ್ತದೆ. ನೀವು ಕೂಡ ನಿಮಗೆ ಅವಕಾಶ ಸಿಕ್ಕಾಗ ಸಮಾಜದ ಕೆಲಸ ಮಾಡಬೇಕು. ಮನುಷ್ಯನಲ್ಲಿ ನಂಬಿಕೆ ಇಲ್ಲದಿದ್ದರೆ ಸಂಬಂಧಗಳು ಉಳಿಯುವುದಿಲ್ಲ. ನಾವು ಜನಪ್ರತಿನಿಧಿಗಳು ಹೇಗೆ ಜನರನ್ನು ಪ್ರತಿನಿಧಿಸುತ್ತೇವೆಯೋ ಅದೇ ರೀತಿ, ಎಲ್ಲಾ ಸರ್ಕಾರಿ ನೌಕರರು ರಾಜ್ಯದ ಏಳುವರೆ ಕೋಟಿ ಜನರನ್ನು ಪ್ರತಿನಿಧಿಸುತ್ತೀರಿ. ನೀವೆಲ್ಲರೂ ಜನರ ಸೇವೆ ಮಾಡುವ ಅವಕಾಶ ಪಡೆದಿದ್ದು, ಆತ್ಮಸಾಕ್ಷಿಗೆ ತೃಪ್ತಿಯಾಗುವಂತೆ ಕೆಲಸ ಮಾಡಬೇಕು. ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧನೆ ಮಾಡುತ್ತೇವೆ ಎಂಬುದು ಮುಖ್ಯ. ನೀವು ನಿಮ್ಮ ಜೀವನದಲ್ಲಿ ಎಷ್ಟು ಜನರ ಬದುಕು ಬದಲಾವಣೆ ಮಾಡಲು ಪೆನ್ನು ಪೇಪರ್ ಬಳಸುತ್ತೀರಿ ಎಂಬುದು ಮುಖ್ಯ ಎಂದರು.
ಮುಖ್ಯಮಂತ್ರಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಬೇಕಿತ್ತು, ಆದರೆ ಅವರಿಗೆ ವೈದ್ಯರು ವಿಶ್ರಾಂತಿ ಹೇಳಿದ್ದಾರೆ. ನಮ್ಮ ಸರ್ಕಾರದ ಮೇಲೆ ಎಲ್ಲಾ ವರ್ಗದ ಜನರ ನಂಬಿಕೆ ಇಟ್ಟಿದ್ದಾರೆ. ಜಾತಿ, ಧರ್ಮದ ತಾರತಮ್ಯ ಮೇಲೆ ನನಗೆ ನಂಬಿಕೆ ಇಲ್ಲ. ಎಲ್ಲಾ ಜಾತಿ, ಸಮುದಾಯಗಳು ಬೇಕು. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದ ವಿಶ್ವಕ್ಕೆ ಶಾಂತಿ ಸಿಗಲಿ ಎಂದು ನಮ್ಮ ಗುರುಗಳು ಹೇಳಿದ್ದಾರೆ. ಪ್ರತಿಯೊಬ್ಬರೂ ತಮ್ಮ ಧರ್ಮದ ಮೇಲೆ ನಂಬಿಕೆ ಇಟ್ಟುಕೊಂಡಿರುತ್ತಾರೆ. ಅವರ ಆಚಾರ ವಿಚಾರ ಅವರದು. ನಾವು ಅದರಲ್ಲಿ ಯಾಕೆ ಮೂಗು ತೂರಿಸಬೇಕು ಎಂದರು.
ಗ್ಯಾರಂಟಿ ಫಲಾನುಭವಿಗಳಿಗೆ ಹಣ ಸಿಕ್ಕೇ ಸಿಗುತ್ತೆ: ಜನಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರೆಲ್ಲರೂ ಒಂದೇ. ನಾವು ನಿಮ್ಮನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತೇವೆ. ನಿಮ್ಮ ಬೇಡಿಕೆಯನ್ನು ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಿದ್ದೇವೆ. ನಾವು ರಾಜ್ಯದ ನಾಲ್ಕು ಕೋಟಿ ಜನರಿಗೆ ಸಹಾಯ ಮಾಡುವ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಹಂತಹಂತವಾಗಿ ಸಂಪನ್ಮೂಲ ಕ್ರೋಢೀಕರಣ ಆದಂತೆ ನಾವು ನಮ್ಮ ಯೋಜನೆಗಳ ಫಲಾನುಭವಿಗಳಿಗೆ ಹಣ ನೀಡುತ್ತೇವೆ. ನಾವು ಯಾರಿಗೂ ಗೃಹಲಕ್ಷ್ಮೀ ಹಣ ತಪ್ಪಿಸುವ ಪ್ರಮೇಯವೇ ಇಲ್ಲ ಎಂದು ಭರವಸೆ ನೀಡಿದರು.