ನೀರಿನ ವಿಚಾರ 24 ಕೋಟಿ ಜನರಿಗೆ ಸಂಬಂಧಿಸಿದ್ದಾಗಿದೆ, ಹೀಗಾಗಿ ಈ ವಿಷಯದಲ್ಲಿ ಪಾಕಿಸ್ತಾನ ಎಂದೂ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಹೇಳಿದ್ದಾರೆ.
ಸಿಂಧೂ ನದಿ ನೀರು ವಿಚಾರದಲ್ಲಿ ಭಾರತದ ನಿರ್ಧಾರವನ್ನು ಉಲ್ಲೇಖಿಸಿದ ಮುನೀರ್, ಪಾಕಿಸ್ತಾನದ ಜನರಿಗೆ ಈ ನೀರಿನ ಹಕ್ಕಿದೆ. 24 ಕೋಟಿ ಪಾಕಿಸ್ತಾನಿಗಳ ಈ ಮೂಲಭೂತ ಹಕ್ಕಿನ ಮೇಲೆ ಪಾಕಿಸ್ತಾನ ಸೇನೆ ಯಾವುದೇ ರಾಜಿ ಮಾಡಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದಿದ್ದಾರೆ.
ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ, ಪಾಕಿಸ್ತಾನದೊಂದಿಗಿನ ದಶಕಗಳಷ್ಟು ಹಳೆಯದಾದ ಸಿಂಧೂ ನದಿ ನೀರು ಒಪ್ಪಂದವನ್ನು ರದ್ದುಗೊಳಿಸುವ ಬಗ್ಗೆ ಭಾರತ ಮಾತನಾಡಿದೆ. ಭಾರತ ನೀರು ಸರಬರಾಜು ನಿಲ್ಲಿಸಿದರೆ ಅದನ್ನು ಯುದ್ಧ ಘೋಷಣೆ ಎಂದು ಪರಿಗಣಿಸಲಾಗುತ್ತದೆ ಎಂದು ಮುನೀರ್ ಅವರಿಗೂ ಮೊದಲು ಪಾಕಿಸ್ತಾನ ಸರ್ಕಾರ ಹೇಳಿತ್ತು.
ಬಲೂಚಿಸ್ತಾನದಲ್ಲಿ ಪಾಕ್ ವಿರುದ್ಧ ಹೋರಾಡುತ್ತಿರುವ ಗುಂಪುಗಳಿಗೆ ಭಾರತದಿಂದ ಬೆಂಬಲ ಸಿಗುತ್ತಿದೆ ಎಂದು ಮುನೀರ್ ಹೇಳಿದ್ದಾರೆ. ಬಲೂಚಿಸ್ತಾನದಲ್ಲಿ ಇತ್ತೀಚೆಗೆ ನಡೆದ ಪ್ರಮುಖ ದಾಳಿಗಳು ಮತ್ತು ಜಾಫರ್ ಎಕ್ಸ್‌ಪ್ರೆಸ್ ರೈಲು ಅಪಹರಣಕ್ಕೆ ಭಾರತವೇ ಕಾರಣ ಎಂದು ಪಾಕಿಸ್ತಾನ ಸೇನೆ ಮತ್ತು ಸರ್ಕಾರ ದೂಷಿಸುತ್ತಿದೆ.
ಸಿಂಧೂ ನದಿ ನೀರು ಒಪ್ಪಂದದ ವಿಷಯದಲ್ಲಿ ಪಾಕಿಸ್ತಾನ ಭಾರತಕ್ಕೆ ಬೆದರಿಕೆ ಹಾಕುತ್ತಿದೆ. ಸಿಂಧೂ ನದಿ ನೀರು ಒಪ್ಪಂದದ ಪ್ರಕಾರ, ನದಿ ನೀರನ್ನು ಭಾರತ ಮತ್ತು ಪಾಕಿಸ್ತಾನದ ನಡುವೆ ವಿಂಗಡಿಸಲಾಗಿದೆ. ಭಾರತವು ಪಾಕಿಸ್ತಾನಕ್ಕೆ ನೀರು ಹರಿಸುವುದನ್ನು ನಿಲ್ಲಿಸುವ ಸುಳಿವು ನೀಡಿದ ನಂತರ ಇಸ್ಲಾಮಾಬಾದ್‌ನಲ್ಲಿ ಕಳವಳ ಹೆಚ್ಚುತ್ತಿದೆ. ಪಾಕಿಸ್ತಾನ ನಾಯಕರು ಮತ್ತು ಸೇನಾ ಅಧಿಕಾರಿಗಳು ನಿರಂತರ ಹೇಳಿಕೆಗಳನ್ನು ನೀಡುತ್ತಿದ್ದಾರೆ.