Menu

ಬಿಹಾರದಲ್ಲಿ ಎನ್‌ಡಿಎ ಪ್ರಣಾಳಿಕೆ ಬಿಡುಗಡೆ: ಭರಪೂರ ಭರವಸೆಗಳು

ನವೆಂಬರ್ 6 ಹಾಗೂ 11ರಂದು ಎರಡು ಹಂತಗಳಲ್ಲಿ ಬಿಹಾರ ವಿಧಾನಸಭಾ ಚುನಾವಣೆ ನಡೆಯಲಿದ್ದು, ಎನ್​ಡಿಎ ಪ್ರಣಾಳಿಕೆಯನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬಿಡುಗಡೆ ಮಾಡಿದ್ದಾರೆ. ಎನ್‌ಡಿಎ ಪ್ರಣಾಳಿಕೆಯಲ್ಲಿ ಮತದಾರರಿಗೆ ಭರಪೂರ ಭರವಸೆಗಳನ್ನು ನೀಡಲಾಗಿದೆ. ಸರ್ಕಾರಿ ನೌಕರರ ನೇಮಕ, ಉಚಿತ ವಿದ್ಯುತ್, ನಾಲ್ಕು ನಗರಗಳಿಗೆ ಮೆಟ್ರೋ ವಿಸ್ತರಣೆ ಸೇರಿ ಹಲವು ಭರವಸೆಗಳನ್ನು ಎನ್​ಡಿಎ ನೀಡಿದೆ.

ಒಂದು ಕೋಟಿ ಸರ್ಕಾರಿ ನೌಕರರ ನೇಮಕ, ಮುಖ್ಯಮಂತ್ರಿ ಮಹಿಳಾ ರೋಜಗಾರ್​ ಯೋಜನೆ ಜಾರಿ, ಯೋಜನೆಯಡಿ ಮಹಿಳೆಯರಿಗೆ 2 ಲಕ್ಷದವರೆಗೆ ಸಹಾಯ, ಅತಿ ಹಿಂದುಳಿದ ವರ್ಗದವರಿಗೆ 10 ಲಕ್ಷದವರೆಗೆ ಹಣದ ಸಹಾಯ, 1 ಕೋಟಿ ಮಹಿಳೆಯರನ್ನು ಲಖ್​ಪತಿ ದೀದಿಯನ್ನಾಗಿ ಮಾಡುವುದು ಸೇರಿದಂತೆ ಹಲವು ಭರವಸೆಗಳನ್ನು ಎನ್‌ಡಿಎ ಪ್ರಣಾಳಿಕೆಯಲ್ಲಿ ಪ್ರಕಟಿಸಿದೆ.

ಮಿಷನ್ ಕರೋಡಪತಿ ಯೋಜನೆಯಡಿ ಮಹಿಳಾ ಉದ್ಯಮಿಗಳಿಗೆ ಸಹಾಯ, ಬಿಹಾರದ 4 ಹೊಸ ನಗರಗಳಲ್ಲಿ ಮೆಟ್ರೋ ಸೇವೆ ಆರಂಭ, ಬಡ ಕುಟುಂಬಗಳಿಗೆ ‘ಪಂಚಾಮೃತ ಗ್ಯಾರಂಟಿ’ ಯೋಜನೆ ಜಾರಿ, ಬಿಹಾರದಲ್ಲಿ 7 ಎಕ್ಸ್​ಪ್ರೆಸ್​ ಹೆದ್ದಾರಿ ನಿರ್ಮಾಣ, ಬಡ ಕುಟುಂಬಕ್ಕೆ 125 ಯೂನಿಟ್​ ಉಚಿತ ವಿದ್ಯುತ್ ಭರವಸೆ, 3600 ಕಿ.ಮೀ ರೈಲ್ವೆ ಮಾರ್ಗ ಆಧುನೀಕರಣದ ಭರವಸೆಗಳನ್ನು ಪ್ರಣಾಳಿಕೆಯಲ್ಲಿ ಘೋಷಿಸಲಾಗಿದೆ.

ಪ್ರತಿ ಜಿಲ್ಲೆಯಲ್ಲಿ ಅತ್ಯಾಧುನಿಕ ಉತ್ಪಾದನಾ ಘಟಕಗಳು ಮತ್ತು 10 ಹೊಸ ಕೈಗಾರಿಕಾ ಪಾರ್ಕ್‌ಗಳ ಅಭಿವೃದ್ಧಿ, .ಉಚಿತ ಪಡಿತರ, 125 ಯೂನಿಟ್ ಉಚಿತ ವಿದ್ಯುತ್, 5 ಲಕ್ಷದವರೆಗೆ ಉಚಿತ ಚಿಕಿತ್ಸೆ, 50 ಲಕ್ಷ ಹೊಸ ಪಕ್ಕಾ ಮನೆಗಳು, ಸಾಮಾಜಿಕ ಭದ್ರತಾ ಪಿಂಚಣಿ, ಬಡ ಕುಟುಂಬಗಳ ಎಲ್ಲಾ ವಿದ್ಯಾರ್ಥಿಗಳಿಗೆ ಕೆಜಿಯಿಂದ ಪಿಜಿವರೆಗೆ ಉಚಿತ ಗುಣಮಟ್ಟದ ಶಿಕ್ಷಣ, ಶಾಲೆಗಳಲ್ಲಿ ಮಧ್ಯಾಹ್ನದ ಊಟದ ಜೊತೆಗೆ ಪೌಷ್ಟಿಕ ಉಪಹಾರ ಮತ್ತು ಆಧುನಿಕ ಕೌಶಲ್ಯ ಪ್ರಯೋಗಾಲಯ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ಎಲ್ಲಾ ಎಸ್‌ಸಿ ವಿದ್ಯಾರ್ಥಿಗಳಿಗೆ ತಿಂಗಳಿಗೆ 2000 ರೂ. ನೀಡುವ ಭರವಸೆಗಳು ಪ್ರಣಾಳಿಕೆಯಲ್ಲಿವೆ.

ಆಟೋ-ಟ್ಯಾಕ್ಸಿ-ಇ-ರಿಕ್ಷಾ ಚಾಲಕರಿಗೆ 4 ಲಕ್ಷ ರೂಪಾಯಿಗಳ ಜೀವ ವಿಮೆ ನೀಡಲಾಗುವುದು. ಐದು ವರ್ಷಗಳಲ್ಲಿ ಬಿಹಾರ ಪ್ರವಾಹ ಮುಕ್ತವಾಗಲಿದೆ ಎಂಬುದನ್ನು ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮತ್ತು ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್, ಎಲ್‌ಜೆಪಿ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್, ಹಿಂದೂಸ್ತಾನ್ ಅವಾಮ್ ಮೋರ್ಚಾ (ಎಚ್‌ಎಎಂ) ಮುಖ್ಯಸ್ಥ ಜಿತನ್ ರಾಮ್ ಮಾಂಝಿ ಮತ್ತು ರಾಷ್ಟ್ರೀಯ ಲೋಕ ಮೋರ್ಚಾ (ಆರ್‌ಎಲ್‌ಎಂ) ಮುಖ್ಯಸ್ಥ ಉಪೇಂದ್ರ ಕುಶ್ವಾಹಾ ಸೇರಿದಂತೆ ಎನ್‌ಡಿಎ ನಾಯಕರು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *