ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಯು ನೇತೃತ್ವದ ಎನ್ ಡಿಎ ಭಾರೀ ಮುನ್ನಡೆಯೊಂದಿಗೆ ಸ್ಪಷ್ಟ ಬಹುಮತ ಪಡೆದರೆ, ಮಹಾಘಟಬಂಧನ್ ಮೈತ್ರಿಕೂಟ ಧೂಳೀಪಟವಾಗಿದೆ.
ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಆರಂಭವಾಗಿದ್ದು, ಮಧ್ಯಾಹ್ನ 1 ಗಂಟೆಯ ವೇಳೆಗೆ ಎನ್ ಡಿಎ ಮೈತ್ರಿಕೂಟ 201 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ, ಮಹಾಘಟಬಂಧನ್ ಮೈತ್ರಿಕೂಟ 39 ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ.
ಎನ್ ಡಿಎ ಮೈತ್ರಿಕೂಟದ ಪ್ರಮುಖ ಅಂಗಪಕ್ಷವಾದ ಬಿಜೆಪಿ 84 ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಿದ್ದರೆ, ಸಿಎಂ ನೀತಿನ್ ಕುಮಾರ್ ನೇತೃತ್ವದ ಜೆಡಿಯು 82ರಲ್ಲಿ ಮುನ್ನಡೆ ಪಡೆದಿದೆ. ಎಲ್ ಜೆಪಿ 20 ಹಾಗೂ ಇತರೆ ಪಕ್ಷಗಳು 4 ಸ್ಥಾನಗಳಲ್ಲಿ ಮುನ್ನಡೆ ಪಡೆದಿವೆ.
ಮಹಾಘಟಬಂಧನ್ ಮೈತ್ರಿಕೂಟದಲ್ಲಿ ಲಾಲೂ ಪ್ರಸಾದ್ ಅವರ ಆರ್ ಜೆಡಿ ಪಕ್ಷ 29ರಲ್ಲಿ ಹಾಗೂ ಕಾಂಗ್ರೆಸ್ 5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಹಾರ ವಿಧಾನಸಭೆಗೆ ಬಹುಮತ ಪಡೆಯಲು 122 ಸ್ಥಾನಗಳಲ್ಲಿ ಗೆಲುವು ಅಗತ್ಯವಿದ್ದು, ಇದೀಗ ಎನ್ ಡಿಎ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೇರುವುದು ಸ್ಪಷ್ಟವಾಗಿದೆ.


