ಭಾರತೀಯ ನೌಕಾ ಪಡೆಗೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ನೀಡುತ್ತಿದ್ದ ಪ್ರಕರಣದಲ್ಲಿ ಉಡುಪಿ ಪೊಲೀಸರು ಮತ್ತೊಬ್ಬನನ್ನು ಬಂಧಿಸುವ ಮೂಲಕ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಮಲ್ಪೆ ಬಂದರಿನ ಕೊಚ್ಚಿನ್ ಶಿಪ್ ಯಾರ್ಡ್‌ಗೆ ಸಂಬಂಧಿಸಿದ ನೌಕರರು ನೌಕಾಪಡೆಯ ಹಡಗುಗಳ ಸಂಖ್ಯೆಗಳ ಗೌಪ್ಯ ಮಾಹಿತಿಯನ್ನು ವಾಟ್ಸ್ಆ್ಯಪ್ ಮತ್ತು ಫೇಸ್‌ಬುಕ್ ಮೂಲಕ ಪಾಕಿಸ್ತಾನದ ಜತೆ ಹಂಚಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಬಂಧಿತನನ್ನು ಪಶ್ಚಿಮ ಬಂಗಾಳದ 21 ವರ್ಷದ ಆಲಿಫ್ ಇಸ್ಲಾಂ ಎಂದು ಗುರುತಿಸಲಾಗಿದೆ. ಆತ ಕೇರಳದ ಇಡುಕ್ಕಿ ಜಿಲ್ಲೆಯ ಮರಾಯು ಗ್ರಾಮದಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ. ಆತ ಬಾಂಗ್ಲಾದೇಶದ ಪ್ರಜೆ ಆಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.
2025ರ ನವೆಂಬರ್ ಹಾಗೂ ಡಿಸೆಂಬರ್ನಲ್ಲಿ ಗುಜರಾತ್‌ನ ಹಿರೇಂದ್ರ ಕುಮಾರ್, ಉತ್ತರ ಪ್ರದೇಶದ ರೋಹಿತ್ ಮತ್ತು ಸಂತ್ರಿ ಎಂಬವರನ್ನು ಈ ಪ್ರಕರಣ ಸಂಬಂಧ ಬಂಧಿಸಲಾಗಿತ್ತು. ಪ್ರಕರಣದಲ್ಲಿ ಪ್ರಮುಖ ಆರೋಪಿ ಮತ್ತು ಮಾಹಿತಿ ರವಾನಿಸಲು ಬಳಸಿದ ಫೇಸ್‌ಬುಕ್ ಪೇಜ್ ಅಡ್ಮಿನ್ ಬಂಧನಕ್ಕಾಗಿ ಕಾರ್ಯಾಚರಣೆ ತೀವ್ರಗೊಂಡಿದೆ.
ಆರೋಪಿಗಳು ಒಂದೂವರೆ ವರ್ಷದಿಂದ ಹಡಗುಗಳಿಗೆ ಸಂಬಂಧಿಸಿದ ರಹಸ್ಯ ಮಾಹಿತಿ, ತಾಂತ್ರಿಕ ಮಾಹಿತಿಗಳನ್ನು ವಾಟ್ಸ್ಆ್ಯಪ್ ಮೂಲಕ ಪಾಕಿಸ್ತಾನದಲ್ಲಿ ಸಂಪರ್ಕದಲ್ಲಿದ್ದವರಿಗೆ ಕಳುಹಿಸುತ್ತಿದ್ದರು ಎನ್ನಲಾಗಿದೆ. ಭಾರತೀಯ ನೌಕಾಪಡೆಗೆ ಟಗ್‌ಗಳನ್ನು ನಿರ್ಮಿಸಿ ಕೊಡುವ ಸಂಸ್ಥೆ ಕೊಚ್ಚಿನ್ ಶಿಪ್ ಯಾರ್ಡ್. ಖಾಸಗಿ ಸಂಸ್ಥೆಗಳಿಗೂ ಹಡಗುಗಳನ್ನು ನಿರ್ಮಿಸಿಕೊಡುತ್ತಿದೆ. ಸಂಸ್ಥೆಯ ಮುಖ್ಯ ಕಚೇರಿ ಕೇರಳದಲ್ಲಿದೆ.


