Menu

ನೌಕಾನೆಲೆ ಮಾಹಿತಿ ಪಾಕ್ ಗೆ ರವಾನೆ: ಕಾರವಾರದ ಇಬ್ಬರ ಬಂಧನ

ಕಾರವಾರ: ಕದಂಬ ನೌಕಾನೆಲೆ ಮಾಹಿತಿಯನ್ನು ಪಾಕಿಸ್ತಾನದ ಬೇಹುಗಾರರಿಗೆ ನೀಡಿರುವ ಆರೋಪದಡಿ ಮಂಗಳವಾರ ಇಬ್ಬರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಅಧಿಕಾರಿಗಳು ಬಂಧಿಸಿದ್ದಾರೆ.

ಅಂಕೋಲಾ ತಾಲೂಕಿನ ಅಕ್ಷಯ ನಾಯ್ಕ ಹಾಗೂ ಕಾರವಾರ ತಾಲೂಕಿನ ಮುದಗಾದ ವೇತನ ತಾಂಡೇಲ ಬಂಧಿತ ಆರೋಪಿಗಳಾಗಿದ್ದಾರೆ.

ಸೋಮವಾರವೇ ಕಾರವಾರದಲ್ಲಿ ಬೀಡು ಬಿಟ್ಟಿದ್ದ ಹೈದರಾಬಾದಿನಿಂದ ಬಂದ ಎನ್ಐಎ ಅಧಿಕಾರಿಗಳ ತಂಡವು ರಾತ್ರಿಯವರೆಗೂ ನಗರ ಪೊಲೀಸ್ ಠಾಣೆಯಲ್ಲಿ ಅಗತ್ಯ ದಾಖಲೆಗಳ ಪರಿಶೀಲನೆ ನಡೆಸಿದ್ದರು.

ಕಾರವಾರದಲ್ಲಿಯೇ ತಂಗಿದ್ದ ಅವರು ಮಂಗಳವಾರ ನಸುಕಿನ ಜಾವದಲ್ಲಿ ಪ್ರತ್ಯೇಕ ತಂಡ ರಚಿಸಿ ಎರಡು ಕಡೆ ದಾಳಿ ನಡೆಸಿದ್ದಾರೆ. ಅಂಕೋಲಾದಲ್ಲಿ ವಶಕ್ಕೆ ಪಡೆದ ಅಕ್ಷಯ ನಾಯ್ಕ ನನ್ನು ಅಲ್ಲಿಯ ಪೊಲೀಸ್ ಠಾಣೆಯಲ್ಲಿ ಇರಿಸಿಕೊಳ್ಳಲಾಗಿದೆ. ಕಾರವಾರಕ್ಕೆ ತಂದ ಇನ್ನೋರ್ವ ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಲಾಗಿದೆ.

ಕಳೆದ ವರ್ಷ ಅಗಸ್ಟ್ ನಲ್ಲಿ ಹನಿ ಟ್ರ್ಯಾಪ್ ಗೆ ಒಳಗಾದ ಆರೋಪಿಗಳು ನೌಕಾನೆಲೆಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡಿದ್ದಾರೆ ಎಂಬ ಆರೋಪದಡಿ ವಿಚಾರಣೆಗೆ ಒಳಗಾಗಿದ್ದರು.

ಬಂಧಿತ ಆರೋಪಿಗಳು ಸೇರಿದಂತೆ ಮೂವರನ್ನು ಆಗ ವಿಚಾರಣೆ ನಡೆಸಲಾಗಿತ್ತು. ಬಳಿಕ ನೋಟೀಸ್ ನೀಡಿ ಬಿಡಲಾಗಿತ್ತು.
ಕದಂಬ ನೌಕಾನೆಲೆಯ ನೌಕೆಗಳ ಮಾಹಿತಿ ಸೋರಿಕೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ತನಿಖೆ ಕೈಗೊಂಡಿದ್ದ ಎನ್‌ಐಎ ತಂಡ ಮತ್ತೊಮ್ಮೆ ಕಾರವಾರಕ್ಕೆ ಬಂದಿದೆ. ಈ ಬಾರಿ ಯಾವ ಕಾರಣಕ್ಕೆ ಬಂದಿದೆ, ಏನು ತನಿಖೆ ನಡೆಯುತ್ತಿದೆ ಎಂಬ ಸುಳಿವು ಹೊರ ಹಾಕಿರಲಿಲ್ಲ. ಗೌಪ್ಯವಾಗಿ ಕಾರ್ಯಾಚರಣೆ ನಡೆಸುತ್ತಿತ್ತು.

ಕಾರವಾರ ಡಿವೈಎಸ್‌ಪಿ ಸರಕಾರಿ ಮೊಬೈಲ್‌ ಸಂಖ್ಯೆ ಸ್ವಿಚ್ಡ್ ಆಫ್‌ ಆಗಿತ್ತು. ಪೊಲೀಸ್‌ ಇತರ ಹಿರಿಯ ಅಧಿಕಾರಿಗಳು ಕೂಡ ರಾತ್ರಿಯಾದರೂ ಯಾರ ದೂರವಾಣಿ ಕರೆ ಸ್ವೀಕರಿಸಿರಲಿಲ್ಲ. ಹಾಗಾಗಿ ಎನ್‌ಐಎ ತಂಡದ ಓಡಾಟದ ಬಗ್ಗೆ ತೀವ್ರ ಕುತೂಹಲ ಸೃಷ್ಟಿಯಾಗಿತ್ತು.ಈ ಹಿಂದೆ ನೌಕಾನೆಲೆ ಮಾಹಿತಿ ಹಂಚಿಕೊಂಡ ಪ್ರಕರಣದ ವಿಚಾರಣೆಗಾಗಿ ಎನ್‌ಐಎ ತಂಡ ಬಂದಿತ್ತು. ಕದಂಬ ನೌಕಾನೆಲೆ ಗ್ರಾಮೀಣ ಠಾಣೆ ವ್ಯಾಪ್ತಿಗೆ ಬರುವ ಕಾರಣಕ್ಕೆ ಆಗ ಕಾರವಾರ ಗ್ರಾಮೀಣ ಠಾಣೆಯಲ್ಲಿಆರೋಪಿಗಳ ವಿಚಾರಣೆ ಕೈಗೊಂಡಿತ್ತು.

Related Posts

Leave a Reply

Your email address will not be published. Required fields are marked *