ರಷ್ಯಾದೊಂದಿಗೆ ವ್ಯಾಪಾರ ವ್ಯವಹಾರ ಮುಂದುವರಿಸಿದರೆ ಕಠಿಣ ಆರ್ಥಿಕ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ ಎಂದು ಭಾರತ, ಚೀನಾ, ಬ್ರೆಜಿಲ್ ದೇಶಗಳಿಗೆ ನ್ಯಾಟೊ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕದ ಸೆನೆಟರ್‌ಗಳ ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರುಟ್ಟೆ, ಭಾರತ, ಚೀನಾ, ಬ್ರೆಜಿಲ್ ನಾಯಕರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಶಾಂತಿ ಮಾತುಕತೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಡ ಹೇರಬೇಕೆಂದು ಆಗ್ರಹಿಸಿದ್ದಾರೆ.
ಚೀನಾ, ಬ್ರೆಜಿಲ್, ಭಾರತ ರಷ್ಯಾದೊಂದಿಗೆ ವ್ಯಾಪಾರ ಮುಂದುವರಿಸಿವೆ. ಈ ರಾಷ್ಟ್ರಗಳು ತೈಲ ಮತ್ತು ಅನಿಲ ಖರೀದಿಸುವುದನ್ನು ಮುಂದುವರಿಸುವುದಾದರೆ ಉಕ್ರೇನ್ ಜೊತೆ ಶಾಂತಿ ಮಾತುಕತೆಗೆ ಒತ್ತಡ ಹಾಕಬೇಕು, ಇಲ್ಲದಿದ್ದರೆ ವ್ಯಾಪಾರ ನಿರ್ಬಂಧ ವಿಧಿಸುವುದಾಗಿ ಹೇಳಿದ್ದಾರೆ.
ಮೂರು ರಾಷ್ಟ್ರಗಳ ನಾಯಕರು ವ್ಲಾಡಿಮಿರ್ ಪುಟಿನ್ ಅವರಿಗೆ ಕರೆ ಮಾಡಿ ಶಾಂತಿ ಮಾತುಕತೆಗಳ ಬಗ್ಗೆ ಗಂಭೀರವಾಗಿ ಯೋಚಿಸಲು ತಿಳಿಸಲೇಬೇಕು ಎಂದಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್‌ಗೆ ಹೊಸ ಮಿಲಿಟರಿ ಬೆಂಬಲವನ್ನು ಘೋಷಿಸಿದ್ದಾರೆ. ರಷ್ಯಾ ಮತ್ತು ಅದರ ವ್ಯಾಪಾರ ಪಾಲುದಾರರ ಮೇಲೆ ವ್ಯಾಪಕ ಸುಂಕಗಳನ್ನು ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಈಗ ನ್ಯಾಟೋ ಅಧ್ಯಕ್ಷರು ನಿರ್ಬಂಧ ಹಾಕುವುದಾಗಿ ಬೆದರಿಸಿದ್ದಾರೆ.
ಟ್ರಂಪ್, ರಷ್ಯಾದ ರಫ್ತುಗಳ ಮೇಲೆ ಶೇ.100 ಸುಂಕ ವಿಧಿಸುವುದಾಗಿ ಎಚ್ಚರಿಸಿದ್ದಾರೆ. 50 ದಿನಗಳಲ್ಲಿ ಉಕ್ರೇನ್ ಜೊತೆ ಶಾಂತಿ ಒಪ್ಪಂದ ಮಾಡಿಕೊಳ್ಳದಿದ್ದರೆ ರಷ್ಯಾದ ತೈಲ ಖರೀದಿಸುವುದನ್ನು ಮುಂದುವರಿಸುವ ದೇಶಗಳ ಮೇಲೆ ದ್ವಿತೀಯ ನಿರ್ಬಂಧ ವಿಧಿಸುವ ಬಗ್ಗೆ ತಿಳಿಸಿದ್ದಾರೆ.