Menu

ಸೋನಿಯಾ ರಾಹುಲ್ ಗೆ ಇಡಿ ಸಂಕಷ್ಟ 661 ಕೋಟಿ ಮೌಲ್ಯದ ಆಸ್ತಿ ಸ್ವಾಧೀನಕ್ಕೆ ಇಡಿ ನೋಟೀಸ್

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಲೋಕಸಭೆಯ ಪ್ರತಿಪಕ್ಷದ ನಾಯಕ‌ ರಾಹುಲ್ ಗಾಂಧಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರಿಗೆ ಮತ್ತೊಮ್ಮೆ ಜಾರಿ ನಿರ್ದೇಶನಾಲಯ(ಇಡಿ)ದ ಸಂಕಷ್ಟ ಎದುರಾಗಿದೆ.

ಕಾಂಗ್ರೆಸ್ ನಿಯಂತ್ರಿತ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ವಿರುದ್ಧದ ಹಣ ವರ್ಗಾವಣೆ ಪ್ರಕರಣದ ತನಿಖೆಯಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದ 661 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಜಾರಿ ನಿರ್ದೇಶನಾಲಯ ಶನಿವಾರ ನೋಟೀಸ್ ಜಾರಿ ಮಾಡಿದೆ.

ದೆಹಲಿಯ ಐಟಿಒದಲ್ಲಿರುವ ಹೆರಾಲ್ಡ್ ಹೌಸ್, ಮುಂಬೈನ ಬಾಂದ್ರಾ ಪ್ರದೇಶದ ಆವರಣದಲ್ಲಿ ಮತ್ತು ಲಕ್ನೋದ ಬಿಶೇಶ್ವರ್ ನಾಥ್ ರಸ್ತೆಯಲ್ಲಿರುವ ಎಜೆಎಲ್ ಕಟ್ಟಡದಲ್ಲಿ ಶುಕ್ರವಾರ ಈ ನೋಟಿಸ್‌ಗಳನ್ನು ಅಂಟಿಸಲಾಗಿದೆ ಎಂದು ಫೆಡರಲ್ ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಕಳೆದ ಏಪ್ರಿಲ್ 11ರಂದು ಕೇಂದ್ರ ತನಿಖಾ ಸಂಸ್ಥೆ ಇಡಿ ದೆಹಲಿ, ಮುಂಬೈ ಮತ್ತು ಲಕ್ನೋದಲ್ಲಿನ ಆಸ್ತಿ ನೋಂದಣಿದಾರರಿಗೆ ನೋಟಿಸ್ ಜಾರಿ ಮಾಡಿದೆ. ಅಲ್ಲಿ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್)ನ ಆಸ್ತಿಗಳನ್ನು ಅಂದರೆ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರ ಒಡೆತನದ ಕಂಪನಿಯಾದ ಯಂಗ್ ಇಂಡಿಯನ್ ಲಿಮಿಟೆಡ್ (ವೈಐಎಲ್) ಕಟ್ಟಡಗಳಿವೆ. ಅವುಗಳನ್ನು ಸ್ವಾಧೀನಕ್ಕೆ ಪಡೆಯುವ ಪ್ರಕ್ರಿಯೆ ಆರಂಭವಾಗಿದೆ.

ಈ ಪ್ರಕರಣವು ಒಮ್ಮೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಪ್ರಕಟಿಸಿದ್ದ ಎಜೆಎಲ್ ಅನ್ನು ವೈಐಎಲ್ ಸ್ವಾಧೀನಪಡಿಸಿಕೊಳ್ಳುವಲ್ಲಿ ಹಣಕಾಸಿನ ಅಕ್ರಮಗಳು ಮತ್ತು ಹಣದ ದುರುಪಯೋಗದ ಆರೋಪಗಳಿಗೆ ಸಂಬಂಧಿಸಿದೆ. ಆರಂಭಿಕ ದೂರು ದಾಖಲಿಸಿದ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ಯಂಗ್ ಇಂಡಿಯನ್ 2 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಮೌಲ್ಯದ ಆಸ್ತಿಗಳ ಮೇಲೆ ಹಿಡಿತ ಸಾಧಿಸಲು ಎಜೆಎಲ್‌ನ ಆಸ್ತಿಗಳನ್ನು ದುರುದ್ದೇಶಪೂರಿತ ರೀತಿಯಲ್ಲಿ ವಶಪಡಿಸಿಕೊಂಡಿದೆ ಎಂದು ಆರೋಪಿಸಿದ್ದರು.

ತಾತ್ಕಾಲಿಕ ಮುಟ್ಟುಗೋಲು:

ಇಡಿ ಪ್ರಕಾರ, ಎಜೆಎಲ್‌ನ ಆಸ್ತಿಗಳಿಗೆ ಸಂಬಂಧಿಸಿದ 988 ಕೋಟಿ ರೂ.ಗಳ ಅಪರಾಧದ ಆದಾಯದ ಅಕ್ರಮ ವರ್ಗಾವಣೆಯನ್ನು ಬಹಿರಂಗಪಡಿಸಿದ ತನಿಖೆಗಳ ನಂತರ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ನವೆಂಬರ್ 2023ರಲ್ಲಿ, ಇಡಿ ದೆಹಲಿ, ಮುಂಬೈ ಮತ್ತು ಲಕ್ನೋದಲ್ಲಿನ 661 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳನ್ನು ಮತ್ತು 90.2 ಕೋಟಿ ರೂ.ಗಳ ಮೌಲ್ಯದ ಎಜೆಎಲ್ ಷೇರುಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿತ್ತು. ಈ ಮುಟ್ಟುಗೋಲನ್ನು ಏಪ್ರಿಲ್ 10ರಂದು ದೃಢಪಡಿಸಲಾಯಿತು.

ಮುಂಬೈನ ಹೆರಾಲ್ಡ್ ಹೌಸ್‌ನಲ್ಲಿ ಪ್ರಸ್ತುತ 3 ಮಹಡಿಗಳ ನಿವಾಸಿಯಾಗಿರುವ ಜಿಂದಾಲ್ ಸೌತ್ ವೆಸ್ಟ್ ಪ್ರಾಜೆಕ್ಟ್ಸ್‌ಗೆ ಪ್ರತ್ಯೇಕ ನೋಟಿಸ್ ನೀಡಲಾಗಿದೆ. ಭವಿಷ್ಯದ ಎಲ್ಲಾ ಬಾಡಿಗೆ ಪಾವತಿಗಳನ್ನು ನೇರವಾಗಿ ಇಡಿಗೆ ಠೇವಣಿ ಇಡುವಂತೆ ಕಂಪನಿಗೆ ನಿರ್ದೇಶಿಸಲಾಗಿದೆ.

ಹೆರಾಲ್ಡ್ ಪ್ರಕರಣ:

2021ರಲ್ಲಿ ಪ್ರಾರಂಭವಾದ ಇಡಿ ತನಿಖೆಯು ಸುಬ್ರಮಣಿಯನ್ ಸ್ವಾಮಿ ಅವರು 2014ರಲ್ಲಿ ದೆಹಲಿ ನ್ಯಾಯಾಲಯದಲ್ಲಿ ಸಲ್ಲಿಸಿದ ಖಾಸಗಿ ಕ್ರಿಮಿನಲ್ ದೂರಿನಿಂದ ಹುಟ್ಟಿಕೊಂಡಿತ್ತು. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರ ಹಿರಿಯ ಕಾಂಗ್ರೆಸ್ ನಾಯಕರು ಯಂಗ್ ಇಂಡಿಯನ್ ಮೂಲಕ 50 ಲಕ್ಷ ರೂ. ಮೊತ್ತಕ್ಕೆ ಎಜೆಎಲ್​ ನ 2 ಸಾವಿರ ಕೋಟಿ ರೂ. ಗಿಂತ ಹೆಚ್ಚಿನ ಮೌಲ್ಯದ ಆಸ್ತಿಗಳನ್ನು ವಂಚನೆಯಿಂದ ಸ್ವಾಧೀನಪಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

Related Posts

Leave a Reply

Your email address will not be published. Required fields are marked *