ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇಡಿ) ಸೋನಿಯಾಗಾಂಧಿ ಮತ್ತು ರಾಹುಲ್‌ಗಾಂಧಿ ಅವರ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ದಾಖಲಿಸುವ ವಿಚಾರದಲ್ಲಿ ಕಾನೂನು ಪ್ರಕ್ರಿಯೆಗೆ ಸಂಬಂಧಿಸಿದ ವಿಧಿ ವಿಧಾನಗಳನ್ನು (ಪ್ರೊಸೀಜರ್) ಗಾಳಿಗೆ ತೂರಿದೆ ಎಂಬುದನ್ನು ದೆಹಲಿ ಹೈಕೋರ್ಟ್ ಪರೋಕ್ಷವಾಗಿ ಎತ್ತಿ ತೋರಿದೆ.
ಜಾರಿ ನಿರ್ದೇಶನಾಲಯವು ಎಫ್ ಐ ಆರ್ ಇಲ್ಲದೆ ಕೋರ್ಟ್‌ಗೆ ಸಲ್ಲಿಸಿದ ಚಾರ್ಜ್‌ಶೀಟ್, ಕಾನೂನಿನ ದೃಷ್ಟಿಯಲ್ಲಿ ಸಮ್ಮತವಲ್ಲ- ಇದು ದಿಲ್ಲಿ ಹೈಕೋರ್ಟ್ ಎರಡು ದಿನಗಳ ಹಿಂದೆ ನೀಡಿದ ತೀರ್ಪಿನ ಪ್ರಮುಖ ತಿರುಳು. ಈ ತಿರುಳು ದೇಶದ ಪ್ರಮುಖ ರಾಜಕೀಯ ಧುರೀಣರು ಭಾಗಿಯಾಗಿದ್ದಾರೆಂಬ ವಿಷಯಕ್ಕೆ ಸಂಬಂಧಿಸಿದ್ದಲ್ಲ. ಇದು ಹಾಗಿರಲಿ. ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕಿಂತಲೂ ಮೊದಲು ಇದೇ ರೀತಿಯಾದ ತೀರ್ಪನ್ನು ದೇಶದ ಸಾಂವಿಧಾನಿಕ ನ್ಯಾಯಾಲಯಗಳು ನೀಡಿರುವುದು ಗಮನಾರ್ಹ.
ದಶಕದ ಹಿಂದೆ ರಾಜಕೀಯ ಮುಖಂಡ ಡಾ. ಸುಬ್ರಮಣಿಯನ್‌ಸ್ವಾಮಿ ದಾಖಲಿಸಿದ ಖಾಸಗಿ ದೂರು (ಪಿಸಿಆರ್) ಮೇರೆಗೆ ತನಿಖೆ ಮಾಡಿದ ಜಾರಿ ನಿರ್ದೇಶನಾಲಯ ಸಲ್ಲಿಸಿದ ಇಸಿಐಆರ್ ಅನ್ನು ಪೊಲೀಸರು ತನಿಖೆ ನಡೆಸಿ ಸಲ್ಲಿಸುವ ಎಫ್‌ಐ ಆರ್‌ಗೆ ಸಮಾನವಲ್ಲ ಎಂಬುದು ದಿಲ್ಲಿ ಹೈಕೋರ್ಟ್ ನೀಡಿರುವ ತೀರ್ಪಿನ ಒಟ್ಟಾರೆ ಸಾರಾಂಶ. ಇಂತಹ ತೀರ್ಪುಗಳು ಸ್ವತಂತ್ರ ತನಿಖಾ ಸಂಸ್ಥೆಗಳ ಕಣ್ಣು ತೆರೆಸಬೇಕು. ಏಕೆಂದರೆ ಇಂದು ಸ್ವತಂತ್ರ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಇಡಿ ಈ ನೆಲದ ಕಾನೂನುಗಳನ್ನು ಸಮರ್ಪಕವಾಗಿ ಬಳಸದಿದ್ದಾಗ, ಇದರಿಂದ ಸಾರ್ವಜನಿಕರಿಗೆ ಆಗುವ ತೊಂದರೆ ಮತ್ತು ನಷ್ಟದ ಪ್ರಮಾಣ ಏನು ಮತ್ತು ಎಷ್ಟು ಎಂಬುದೂ ಮುಖ್ಯ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಹುಟ್ಟು ಹಾಕಿದ್ದು ದೇಶದ ಮೊದಲ ಪ್ರಧಾನಿ ಜವಹರಲ್‌ಲಾಲ್ ನೆಹರೂ, ಇದರ ಸಂಪೂರ್ಣ ನಿರ್ವಹಣೆ ವಹಿಸಿದ ಆಡಳಿತ ಮಂಡಳಿಯ ಹಣಕಾಸಿನ ವ್ಯವಹಾರದಲ್ಲಿ ಲೇವಾದೇವಿ ಆಗಿದೆ ಎಂಬುದು ದೂರುದಾರರ ಪ್ರಮುಖ ಆರೋಪ. ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಮತ್ತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ಗಾಂಧಿ ಹಾಗೂ ಇತರರು ಭಾಗಿಯಾಗಿದ್ದಾರೆಂಬ ಆರೋಪಗಳ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಅನುಸರಿಸಿದ ವಿಚಾರಣೆಗೆ ದಿಲ್ಲಿ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ ಪೊಲೀಸರು ಸ್ವಯಂಪ್ರೇರಿತರಾಗಿ ಪ್ರಕರಣ ದಾಖಲಿಸಿ , ಇದರ ತನಿಖೆಯನ್ನು ನಡೆಸಿ ಕೋರ್ಟ್‌ಗೆ ಸಲ್ಲಿಸುವ ಎಫ್‌ಐ ಆರ್ ಬಗ್ಗೆ ತನ್ನ ತೀರ್ಪಿನಲ್ಲಿ ಸುದೀರ್ಘ ವ್ಯಾಖ್ಯಾನವನ್ನು ಮಾಡಿದೆ.
ಒಟ್ಟಿನಲ್ಲಿ ಇಡಿ, ಸೋನಿಯಾಗಾಂಧಿ ಮತ್ತು ರಾಹುಲ್‌ಗಾಂಧಿ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ದಾಖಲಿಸುವ ಮುನ್ನ ಕಾನೂನು ಪ್ರಕ್ರಿಯೆಗೆ ಸಂಬಂಧಿಸಿದ ವಿಧಿ ವಿಧಾನಗಳನ್ನು ಇಡಿ ( ಪ್ರೊಸೀಜರ್) ಯಾಕೆ ಕಟ್ಟುನಿಟ್ಟಾಗಿ ಪಾಲಿಸಲಿಲ್ಲ ಎಂಬುದನ್ನು ಪ್ರಶ್ನಿಸಿದೆ. ವಿಧಿ ವಿಧಾನಗಳಿಗೆ ಅನುಸಾರವಾಗಿ ತನಿಖಾ ಸಂಸ್ಥೆಗಳು ನ್ಯಾಯಾಲಯಗಳಲ್ಲಿ ಸಮರ್ಪಕವಾದ ರೀತಿಯಲ್ಲಿ ದಾಖಲೆಗಳನ್ನು ಸಲ್ಲಿಸಲು ವಿಫಲವಾಗಿರುವುದನ್ನು ಕಂಡಾಗ ಇನ್ನೂ ಕೆಲವು ಸಂದೇಹಗಳು ಸುಳಿದಾಡುವುದು ಸರ್ವೇ ಸಾಮಾನ್ಯ. ಸದ್ಯ ಸೋನಿಯಾಗಾಂಧಿ ಮತ್ತು ರಾಹುಲ್‌ಗಾಂಧಿ ಕಾನೂನಿನ ವಜ್ರಾಯುಧದಿಂದ ಪಾರಾಗಿರುವುದು ಗಮನಾರ್ಹ. ಮಿಗಿಲಾಗಿ ಇದನ್ನೇ ರಾಜಕೀಯ ಅಸ್ತ್ರ ಮಾಡಿಕೊಂಡು ಸೋನಿಯಾ ಮತ್ತು ರಾಹುಲ್ ಅವರನ್ನು ಸಾರ್ವಜನಿಕ ವಾಗಿ ಟೀಕೆ ಮಾಡುವ ಬಿಜೆಪಿ ಹಾಗೂ ಮಿತ್ರಕೂಟದ ರಾಜಕೀಯ ನಾಯಕರ ಬಾಯಿಗೆ ಈಗ ದಿಲ್ಲಿ ಹೈಕೋರ್ಟ್ ಬೀಗ ಹಾಕಿದೆ.


