Menu

ನ್ಯಾಷನಲ್ ಹೆರಾಲ್ಡ್ ಅಕ್ರಮ: ಹಣ ವರ್ಗಾವಣೆ ಆರೋಪ ತೀರ್ಪು ಕಾಯ್ದಿರಿಸಿದ ಕೋರ್ಟ್‌

ನ್ಯಾಷನಲ್ ಹೆರಾಲ್ಡ್ ಅಕ್ರಮ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ, ರಾಹುಲ್ ಗಾಂಧಿ ಹಾಗೂ ಉಳಿದ ಐವರ ವಿರುದ್ಧದ ಹಣ ವರ್ಗಾವಣೆ ಆರೋಪವನ್ನು ಪರಿಗಣಿಸಬೇಕೆ ಎಂಬ ಕುರಿತು ದೆಹಲಿ ನ್ಯಾಯಾಲಯ ತೀರ್ಪು ಕಾಯ್ದಿರಿಸಿದೆ.

ಜುಲೈ 29ರಂದು ಆದೇಶ ಪ್ರಕಟಿಸುವುದಾಗಿ ರೋಸ್‌ ಅವೆನ್ಯೂ ಕೋರ್ಟ್‌ ಕಾಂಪ್ಲೆಕ್ಸ್‌ನ ಭ್ರಷ್ಟಾಚಾರ ತಡೆ ಕಾಯ್ದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಶಾಲ್ ಗೋಗ್ನೆ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಸೋನಿಯಾ, ರಾಹುಲ್ ಗಾಂಧಿ ಮಾತ್ರವಲ್ಲದೆ ಸುಮನ್ ದುಬೆ, ಸ್ಯಾಮ್ ಪಿತ್ರೋಡಾ, ಸುನಿಲ್‌ ಭಂಡಾರಿ ಹಾಗೂ ಯಂಗ್ ಇಂಡಿಯನ್, ಡೋಟೆಕ್ಸ್ ಮರ್ಚಂಡೈಸ್ ಆರೋಪಿಗಳೆಂದು ಜಾರಿ ನಿರ್ದೇಶನಾಲಯ ಹೆಸರಿಸಿತ್ತು.

ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಒಡೆತನ ಹೊಂದಿದ್ದ ಅಸೋಸಿಯೇಟೆಡ್‌ ಜರ್ನಲ್ಸ್‌ಗೆ ಕಾಂಗ್ರೆಸ್‌ 90 ಕೋಟಿ ರೂ. ಸಾಲ ನೀಡಿತ್ತು. ಯಂಗ್‌ ಇಂಡಿಯನ್‌ ಸಂಸ್ಥೆ ಕಾಂಗ್ರೆಸ್‌ಗೆ 50 ಲಕ್ಷ ಹಣ ನೀಡಿ ಎಜೆಎಲ್‌ ಕಾಂಗ್ರೆಸ್‌ಗೆ ನೀಡಬೇಕಿದ್ದ 90 ಕೋಟಿ ರೂ. ಹಿಂಪಡೆಯಬೇಕಾದ ಹಕ್ಕನ್ನು ತನ್ನದಾಗಿಸಿಕೊಂಡಿತ್ತು. ಹೀಗೆ 2,000 ಕೋಟಿ ರೂ.ಗಿಂತಗೂ ಅಧಿಕ ಮಾರುಕಟ್ಟೆ ಮೌಲ್ಯದ ಆಸ್ತಿಯನ್ನು ಯಂಗ್‌ ಇಂಡಿಯನ್‌ ಸಂಸ್ಥೆಯು ತನ್ನ ವಶಕ್ಕೆ ಪಡೆಯಲು ಅವ್ಯವಹಾರ ನಡೆಸಿದೆ ಎಂಬ ಆರೋಪ ಕೇಳಿಬಂದಿತ್ತು.

ಸೋನಿಯಾ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್, ಸುಮನ್ ದುಬೆ, ಸ್ಯಾಮ್ ಪಿತ್ರೋಡಾ ನಿಯಂತ್ರಣದಲ್ಲಿರುವ ಯಂಗ್ ಇಂಡಿಯನ್ ಲಿಮಿಟೆಡ್‌ ವಿರುದ್ಧ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಖಾಸಗಿ ದೂರು ದಾಖಲಿಸಿ ವಂಚನೆ, ಕ್ರಿಮಿನಲ್ ಪಿತೂರಿ, ಕ್ರಿಮಿನಲ್ ನಂಬಿಕೆ ದ್ರೋಹ ಹಾಗೂ ಆಸ್ತಿ ದುರುಪಯೋಗದ ಆರೋಪ ಮಾಡಿದ್ದರು. ಕಳೆದ ಏಪ್ರಿಲ್ 15 ರಂದು ಗಾಂಧಿ ಕುಟುಂಬ, ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಹಾಗೂ ಇತರರ ವಿರುದ್ಧ ಇಡಿ ಪ್ರಾಸಿಕ್ಯೂಷನ್ ದೂರು ದಾಖಲಿಸಿತ್ತು.

Related Posts

Leave a Reply

Your email address will not be published. Required fields are marked *