ಕೆಎಂಎಫ್ ತುಪ್ಪದ ದರದಲ್ಲಿ ದಿಢೀರ್ 90 ರೂಪಾಯಿ ಏರಿಸಿದ್ದು, ಇಂದಿನಿಂದಲೇ ಹೊಸ ದರ ಜಾರಿಗೆ ಬಂದಿದೆ. ಒಂದು ಲೀಟರ್ ಕೆಎಂಎಫ್ ತುಪ್ಪಕ್ಕೆ 90 ರೂಪಾಯಿ ಹೆಚ್ಚಿಸಿದ್ದು, 700 ರೂಪಾಯಿಗೆ ಏರಿಕೆಯಾಗಿದೆ.
ಈವರೆಗೆ ಒಂದು ಲೀಟರ್ ತುಪ್ಪವನ್ನು 610 ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಜಿಎಸ್‌ಟಿ ಸ್ಲ್ಯಾಬ್ ಸುಧಾರಣೆಗೂ ಮುಂಚೆ ಈ ದರ 650 ರೂಪಾಯಿಗಳಿತ್ತು, ಸುಧಾರಣೆಯಲ್ಲಿ 40 ರೂಪಾಯಿಗಳ ಇಳಿಕೆ ಮಾಡಲಾಗಿತ್ತು. ಆದರೆ ವಿಶ್ವ ಮಾರುಕಟ್ಟೆಯಲ್ಲಿ ತುಪ್ಪದ ದರ ಏರಿಕೆಯ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ತುಪ್ಪದ ದರ ಏರಿಕೆ ಮಾಡಲಾಗಿದೆ ಎಂದು ಕೆಎಂಎಫ್ ಅಧಿ ಕಾರಿಗಳು ಮಾಹಿತಿ ನೀಡಿದ್ದಾರೆ.
ಯಾವುದೇ ಸಮರ್ಥನೆ ಕೊಟ್ಟರೂ ಕೆಎಂಎಫ್ ಏಕಾಏಕಿ ತುಪ್ಪಕ್ಕೆ ಹೀಗೆ ದರ ಏರಿಕೆ ಮಾಡಬಾರದಿತ್ತು, ಜೀವನಾವಶ್ಯಕ ವಸ್ತುಗಳ ದರ ಮೊದಲೇ ಗಗನಕ್ಕೇರಿದ್ದು, ಈಗ ತುಪ್ಪದ ದರ ಕೂಡ ಏರಿಕೆ ಮಾಡುವ ಮೂಲಕ ಬಡವರ ಪಾಲಿಗೆ ದುಬಾರಿಯಾಗಿ ಪರಿಣಮಿಸಿದೆ ಎಂದು ಸಾರ್ವಜನಿಕರು ಾಸಮಾಧಾನ ವ್ಯಕ್ತಪಡಿಸಿದ್ದಾರೆ.


