ಬೆಂಗಳೂರಿನ ನಗರ್ತಪೇಟೆಯಲ್ಲಿ ಅಗ್ನಿ ದುರಂತ ಸಂಭವಿಸಿ ಐವರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಹಲಸೂರು ಗೇಟ್ ಪೊಲೀಸರು ಕಟ್ಟಡದ ಮಾಲೀಕ ಮತ್ತು ಆತನ ಮಗನನ್ನು ಬಂಧಿಸಿದ್ದಾರೆ.
ಅನಧಿಕೃತವಾಗಿ ನಿರ್ಮಾಣ ಕಾಮಗಾರಿ, ಸುರಕ್ಷತಾ ಕ್ರಮಗಳ ಉಲ್ಲಂಘನೆ ಮತ್ತು ಅಗ್ನಿ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಅಳವಡಿಸಲು ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಕಟ್ಟಡ ಮಾಲೀಕ ಬಾಲಕೃಷ್ಣಯ್ಯ ಶೆಟ್ಟಿ ಮತ್ತು ಅವರ ಪುತ್ರ ಸಂದೀಪ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಶನಿವಾರ ನಸುಕಿನಲ್ಲಿ ಕಟ್ಟಡದ ನೆಲಮಹಡಿಯಲ್ಲಿ ಹೊತ್ತಿಕೊಂಡಿದ್ದ ಬೆಂಕಿ ಮೇಲಿನ ಮಹಡಿಗೆ ವ್ಯಾಪಿಸಿ ಐವರು ಮೃತಪಟ್ಟಿದ್ದರು. ಕಟ್ಟಡದಲ್ಲಿದ್ದ ಹೆಚ್ಚಿವರು ತಪ್ಪಿಸಿಕೊಂಡಿದ್ದರು. ಕಟ್ಟಡದ ಮೂರನೇ ಮಹಡಿಯಲ್ಲಿ ವಾಸವಿದ್ದ ಮದನ್ ಸಿಂಗ್ (38) ,ಪತ್ನಿ ಸಂಗೀತಾ (33) ,ಮಕ್ಕಳಾದ ಮಿಥೇಶ್ (7) ಮತ್ತು ವಿಹಾನ್ (5) ನೆರೆ ಮನೆಯ ಸುರೇಶ್ ಕುಮಾರ್ (26) ಮೃತಪಟ್ಟಿದ್ದರು.
ಮದನ್ ಸಿಂಗ್ ರಾಜಸ್ಥಾನದವರಾಗಿದ್ದು, 10 ವರ್ಷಗಳಿಂದ ಕಟ್ಟಡ ಬಾಡಿಗೆಗೆ ಪಡೆದು ವಾಸವಿದ್ದರು. ಪ್ಲಾಸ್ಟಿಕ್ ಸಾಮಗ್ರಿಗಳು ಹಾಗೂ ಚಾಪೆಗಳು, ಉಕ್ಕಿನ ಅಡುಗೆ ಪಾತ್ರೆಗಳನ್ನು ತಯಾರಿಸುವ ಸಣ್ಣ ಉತ್ಪಾದನಾ ಘಟಕ ನಡೆಸುತ್ತಿದ್ದರು. ಕುಟುಂಬ ಕಟ್ಟಡದ ಮೇಲಿನ ಮಹಡಿಯಲ್ಲಿ ವಾಸಿಸುತ್ತಿದ್ದರು. ಸದ್ಯ, ಕಟ್ಟಡದ ಮಾಲೀಕ ಹಾಗೂ ಆತನ ಮಗನನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
30/40 ಜಾಗದಲ್ಲಿ ನಿಯಮ ಉಲ್ಲಂಘಿಸಿ ಐದಾರು ಅಂತಸ್ತುಗಳ ಕಟ್ಟಡ ಕಟ್ಟಿದ್ದಾರೆ. ಚಿಕ್ಕ ಜಾಗ ಆಗಿರುವುದರಿಂದ ರಕ್ಷಣಾ ಕಾರ್ಯಾಚರಣೆಯೂ ಕಷ್ಟವಾಗಿತ್ತು ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ಡಾ. ಜಿ ಪರಮೇಶ್ವರ ಹೇಳಿದ್ದರು.