ನಾಡಹಬ್ಬ ದಸರಾ ಸಂಭ್ರಮಕ್ಕೆ ಕಳೆ ನೀಡುವ ಗಜಪಡೆಯ ಎರಡನೇ ತಂಡ ಆ.25ಕ್ಕೆ ಅರಮನೆ ಪ್ರವೇಶಿಸಲು ದಿನಾಂಕ ನಿಗದಿಪಡಿಸಲಾಗಿದೆ ಎಂದು ಮೈಸೂರು ವನ್ಯಜೀವಿ ವಿಭಾಗ್ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಭುಗೌಡ ತಿಳಿಸಿದ್ದಾರೆ.
ಈ ಸಂಬಂಧ ಪ್ರಕಟಣೆ ನೀಡಿರುವ ಡಾ.ಪ್ರಭುಗೌಡ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮತ್ತಿಗೋಡು ಆನೆ ಶಿಬಿರದಿಂದ ಶ್ರೀಕಂಠ (56 ವರ್ಷ) ಮತ್ತು ಭೀಮನಕಟ್ಟೆ ಆನೆ ಶಿಬಿರದಿಂದ ರೂಪ (44 ವರ್ಷ) ಹೆಣ್ಣಾನೆ ಹಾಗೂ ಮಡಿಕೇರಿ ವಿಭಾಗದ ದುಬಾರೆ ಆನೆ ಶಿಬಿರದಿಂದ ಗೋಪಿ (42 ವರ್ಷ), ಸುಗ್ರೀವ (43 ವರ್ಷ), ಮತ್ತು ಹೆಣ್ಣಾನೆಯಾದ ಹೇಮಾವತಿ (11 ವರ್ಷ) ಆನೆಗಳನ್ನು ಮೈಸೂರಿಗೆ ಕರೆತರಲು ಉದ್ದೇಶಿಸಲಾಗಿದ್ದು, ಆ.25ರ ಸಂ.4ಗಂಟೆಗೆ ಪೂಜಾ ಕಾರ್ಯಕ್ರಮದೊಂದಿಗೆ ಮೈಸೂರು ಅರಮನೆ ತಂಡದ ಆನೆಗಳನ್ನು ಬರಮಾಡಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಹೇಮಾವತಿ, ಶ್ರೀಕಂಠ, ರೂಪ ಮೂರು ಹೊಸ ಆನೆಗಳಾಗಿದ್ದು ಇದೇ ಮೊದಲ ಬಾರಿಗೆ ದಸರೆಯಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಆ.4ರಂದು ವೀರನಹೊಸಹಳ್ಳಿ ಬಳಿ ಜರುಗಿದ ಗಜಪಯಣ ಕಾರ್ಯಕ್ರಮ ಮೂಲಕ ಈಗಾಗಲೇ 9 ಆನೆಗಳು ಮೈಸೂರಿಗೆ ಆಗಮಿಸಿದ್ದು, ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಆನೆಗಳಿಗೆ ತಾಲೀಮು ನಡೆಸಲಾಗುತ್ತಿದೆ. ಇನ್ನೂ ಎರಡನೇ ತಂಡದ ಆನೆಗಳ ಬಳಿಕ ಮತ್ತಷ್ಟು ಮೆರವಣಿಗೆ ಮೆರುಗು ತರಲಿದೆ.