ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ಸೆಪ್ಟೆಂಬರ್ 22ರಂದು ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಶನಿವಾರ ಮೈಸೂರು ದಸರಾ ಸಿದ್ಧತೆ ಕುರಿತ ಪೂರ್ವಭಾವಿ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 22ರಂದು ಚಾಮುಂಡಿ ಬೆಟ್ಟದಲ್ಲಿ ಮೈಸೂರು ದಸರಾಗೆ ಚಾಲನೆ ನೀಡಲಾಗುವುದು. ಅಕ್ಟೋಬರ್ 2ರವರೆಗೆ ನಡೆಯಲಿದೆ ಎಂದರು.
ಸಾಮಾನ್ಯವಾಗಿ ಮೈಸೂರು ದಸರಾ 9 ದಿನಗಳ ಕಾಲ ಆಚರಿಸಲಾಗುವುದು. ಆದರೆ ಈ ಬಾರಿ ಅಧಿಕ ಪಂಚಮಿ ಬಂದಿರುವ ಕಾರಣ 11 ದಿನಗಳ ಕಾಲ ದಸರಾ ವಿಜೃಂಬಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.
ಈ ಬಾರಿ ದಸರಾದಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆ ಇದೆ. 21 ದಿನಗಳ ಕಾಲ ಮೈಸೂರಿನಲ್ಲಿ ದೀಪಾಲಂಕಾರ ಇರಲಿದೆ. ಕಳೆದ ಬಾರಿ ದಸರಾ ಆಚರಣೆಗೆ 40 ಕೋಟಿ ರೂ. ಖರ್ಚಾಗಿದ್ದು, ಯಾವುದೇ ಬಿಲ್ ಬಾಕಿ ಉಳಿಸಿಕೊಂಡಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ವಸ್ತು ಪ್ರದರ್ಶನಕ್ಕೆ ಮೊದಲ ದಿನವೇ ಭರ್ತಿ ಆಗುವಂತೆ ನೋಡಿಕೊಳ್ಳಲಾಗುವುದು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವುದರಿಂದ ನೂಕುನುಗ್ಗಲು ಆಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಅಲ್ಲದೇ ಪೊಲೀಸರು ಜನಸ್ನೇಹಿಯಾಗಿ ವರ್ತಿಸುವಂತೆ ಸೂಚಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ವಿಜ್ರಂಭಣೆ ರಭಸದಲ್ಲಿ ದಸರಾದ ಚಾರಿತ್ರಿಕ ಮಹತ್ವ ಮರೆಯಾಗಬಾರದು. ಅನಗತ್ಯವಾಗಿ ಹಣ ಖರ್ಚು ಮಾಡುವುದು ವೈಭವ ಅಲ್ಲ. ಜನರ, ಪ್ರವಾಸಿಗರ ಸುರಕ್ಷತೆ ಮತ್ತು ಅನುಕೂಲಕ್ಕೆ ಪ್ರಥಮ ಆದ್ಯತೆ ಇರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಾಡಹಬ್ಬ ಮೈಸೂರು ದಸರಾ-2025 ಆಚರಣೆ ಕುರಿತು ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಸೂಚನೆಗಳನ್ನು ನೀಡಿದರು.
ಸರ್ಕಾರದ ಸಾಧನೆಗಳು, ನಾವು ಪ್ರತೀ ಇಲಾಖೆಯಲ್ಲೂ ಜಾರಿ ಮಾಡಿರುವ ಜನಪರ ಕಾರ್ಯಕ್ರಮಗಳು ಜನರಿಗೆ ಸಮರ್ಪಕವಾಗಿ ಮನವರಿಕೆ ಆಗುವ ರೀತಿಯಲ್ಲಿ ಯೋಜನೆ ರೂಪಿಸಬೇಕು. ಈ ಬಾರಿ ರಾಜ್ಯದಾದ್ಯಂತ ಮಳೆ ಬೆಳೆ ಉತ್ತಮವಾಗಿದ್ದು, ನದಿ, ಕೆರೆಗಳು ತುಂಬಿದ್ದು, ವೈಭವದಿಂದ ದಸರಾ ಆಚರಿಸಲಾಗುವುದು ಎಂದು ಅವರು ಹೇಳಿದರು.