ಬುಕರ್ ಪ್ರಶಸ್ತಿ ವಿಜೇತೆ, ಕನ್ನಡದ ಖ್ಯಾತ ಸಾಹಿತಿ ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ಮಾಡುವುದನ್ನು ತಡೆಯಲು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಒಟ್ಟಿನಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ತೀರ್ಮಾನದಲ್ಲಿ ಮಧ್ಯಪ್ರವೇಶಿಸಲು ನ್ಯಾಯಾಂಗ ನಿರಾಕರಿಸಿದ್ದು, ಬಾನು ಅವರ ದಸರಾ ಭಾಗವಹಿಸುವಿಕೆಗೆ ಇದ್ದ ತೊಡಕು ನಿವಾರಣೆ ಆದಂತಾಗಿದೆ.
ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಕೆಲವರು ಬಾನು ಮುಷ್ತಾಕ್ ಮೈಸೂರು ದಸರಾ ಉದ್ಘಾಟನೆ ಮಾಡುವುದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ರಾಜ್ಯ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಹೈಕೋರ್ಟ್ ಸಮ್ಮತಿಸಿ ಅರ್ಜಿದಾರರಿಗೆ ಚುರುಕು ಮುಟ್ಟಿಸಿತ್ತು. ಈ ವಿಚಾರದಲ್ಲಿ ಯಾವುದೇ ಸಾಂವಿಧಾನಿಕ ಹಕ್ಕು ಉಲ್ಲಂಘನೆ ಆಗಿಲ್ಲ ಎಂದು ಹೈಕೋರ್ಟ್ ಹೇಳಿತ್ತು.
ಪ್ರತಾಪ್ ಸಿಂಹ ಪರ ವಕೀಲರು, ಬಾನು ಅವರಿಗೆ ಮೂರ್ತಿ ಪೂಜೆ ಬಗ್ಗೆ ನಂಬಿಕೆ ಇಲ್ಲ, ಅರಶಿನ ಕುಂಕುಮದ ಬಗ್ಗೆ ನಂಬಿಕೆ ಇಲ್ಲ, ಸಂಪ್ರದಾಯ ವಿರೋಧಿ ಎಂದು ವಾದಿಸಿದ್ದರು. , ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಸನಾತನ ಧರ್ಮ ಎಲ್ಲಾ ವಿಧದ ನಂಬಿಕೆಯನ್ನು ಒಳಗೊಂಡಿದೆ. ದೇವಾಲಯ ಯಾರಿಗೋ ಒಬ್ಬರಿಗೆ ಸೇರಿದ್ದಲ್ಲ, ಎಲ್ಲರೂ ಹೋಗಿ ಬರಬಹುದು ಎಂದು ಸಮರ್ಥನೆ ಮಾಡಿದ್ದರು.
ಹೈಕೋರ್ಟ್ ಆದೇಶ ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಅರ್ಜಿಗಳನ್ನು ವಜಾ ಮಾಡಿದೆ.
ಅರ್ಜಿದಾರರ ಪರ ಹಿರಿಯ ವಕೀಲ ಪಿ.ಬಿ. ಸುರೇಶ್, ಹಿಂದೂಯೇತರ ವ್ಯಕ್ತಿಗೆ ಪೂಜೆಗಳನ್ನು ಮಾಡಲು ಅವಕಾಶ ನೀಡಲಾಗದು, ದೇವಸ್ಥಾನದ ಒಳಗೆ ಪೂಜೆ ಮಾಡುವುದನ್ನು ಜಾತ್ಯತೀತ ಕ್ರಿಯೆ ಎಂದು ಒಪ್ಪಲಾಗದು ಎಂದು ವಾದ ಮಂಡಿಸಿದರು. ವಾದದ ಸಂದರ್ಭದಲ್ಲೇ ನ್ಯಾಯಮೂರ್ತಿ ವಿಕ್ರಮ್ ನಾಥ್ ಅವರು ಅರ್ಜಿ ವಜಾಗೊಳಿಸಲಾಗಿದೆ ಎಂದು ಆದೇಶಿಸಿದರು.