ಮೈಸೂರು ದಸರಾ ನಾಡಿನ ನಾಡಿ, ಸಂಸ್ಕೃತಿಯ ಉತ್ಸವ, ಎಲ್ಲರನ್ನೂ ಒಗ್ಗೂಡಿಸುವ ಸಮನ್ವಯದ ಮೇಳ ಎಂದು 2025ರ ಬುಕರ್ ವಿಜೇತ ಸಾಹಿತಿ ಬಾನು ಮುಷ್ತಾಕ್ ಹೇಳಿದರು. ನನ್ನ ಬದುಕು ಕಲಿಸಿದ ಮುಖ್ಯ ಪಾಠವೆಂದರೆ ವ್ಯಕ್ತಿಯಿಂದ ಸಮಷ್ಠಿಯೆಡೆಗೆ ಸಾಗುವ ದಾರಿ ಮಾತ್ರ ನಿಜವಾದ ದಾರಿ. ನನ್ನ ಧಾರ್ಮಿಕ ನಂಬಿಕೆಗಳು, ನನ್ನ ಜೀವನ ದರ್ಶನ ಎಂದಿಗೂ ಜೀವಪರ. ಅವು ಮರದ ನೆರಳಿನಂತೆ, ತಂಪಾದ ನದಿಯಂತೆ ಎಂದರು.
ಮೈಸೂರಿನಲ್ಲಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ಅಗ್ರಪೂಜೆಯೊಂದಿಗೆ ಪ್ರಾರಂಭವಾದ ದಸರಾ ಮಹೋತ್ಸವ ಉದ್ಘಾಟಿಸಿ ಮಾತನಾಡಿದರು. ಈ ನೆಲದ ಪರಂಪರೆಯೇ ಸರ್ವಜನಾಂಗದ ಶಾಂತಿಯ ತೋಟವಾಗಿದೆ. ಈ ತೋಟದಲ್ಲಿ ಪ್ರತಿ ಹೂ ತನ್ನ ಬಣ್ಣದಲ್ಲೇ ಅರಳಲಿ, ಪ್ರತಿ ಹಕ್ಕಿ ತನ್ನ ರಾಗದಲ್ಲೇ ಹಾಡಲಿ, ಆದರೆ ಒಟ್ಟಿಗೆ ಸೇರಿದಾಗ ಅದು ಸೌಹಾರ್ದ ಸಿಂಫನಿಯಾಗಲಿ. ಪ್ರಜಾಪ್ರಭುತ್ವವು ಕೇವಲ ವ್ಯವಸ್ಥೆಯಲ್ಲ, ಅದು ಮೌಲ್ಯ. ಅದು ಪ್ರತಿಯೊಬ್ಬರ ಧ್ವನಿಯನ್ನು ಗೌರವಿಸುವ ಮನೋಭಾವ. ಅದು ಬೇರೆಯವರ ಬದುಕಿನಲ್ಲಿ ಅರ್ಥಪೂರ್ಣವಾಗಿ ನಡೆದುಕೊಳ್ಳುವ ಜವಾಬ್ದಾರಿ. ಅದನ್ನು ಗೌರವಿಸುವು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಮೈಸೂರು ದಸರಾದ ಪವಿತ್ರದ ಕ್ಷಣದಲ್ಲಿ ಚಾಮುಂಡಿ ತಾಯಿಯ ಕೃಪೆಯ ನೆರಳಿನಲ್ಲಿ, ಈ ವೇದಿಕೆಯಿಂದ ನಿಮ್ಮೆದುರು ನಿಲ್ಲುವ ಅವಕಾಶ ದೊರೆತಿರುವುದು ನನ್ನ ಜೀವನದ ಅತ್ಯಂತ ಗೌರವದ ಘಳಿಗೆ. ಈ ನೆಲದಲ್ಲಿ ಹುಟ್ಟಿದ ಪ್ರತಿಯೊಂದು ಜೀವಕ್ಕೂ ಈ ಮಣ್ಣಿನ ವಾರಿಸುದಾರಿಕೆ, ಸ್ಪಂದನೆ ಮತ್ತು ನೆನಪುಗಳಿವೆ. ಇಂದಿನ ಜಗತ್ತು ಯುದ್ಧದ ಜ್ವಾಲೆಯಲ್ಲಿ ಸುಡುತ್ತಿದೆ. ಇಂದು ಮನುಕುಲವು ದ್ವೇಷ ಮತ್ತು ರಕ್ತಪಾತದಲ್ಲಿ ಮುಳುಗಿರುವಾಗ ದಸರಾ ಘೋಷಣೆಯು ಎಲ್ಲರ ಕಿವಿಯಲ್ಲಿ ಪ್ರತಿಧ್ವನಿಸಲಿ. ಇದು ಶಾಂತಿಯ ಹಬ್ಬ, ಸೌಹಾರ್ದದ ಮೇಳ. ಇದು ಸರ್ವಜನಾಂಗದ ಶಾಂತಿಯ ತೋಟ. ಅಸ್ತ್ರಗಳಿಂದಲ್ಲ, ಅಕ್ಷರದಿಂದ ಬದುಕನ್ನು ಗೆಲ್ಲಬಹುದು. ಹಗೆಗಳಿಂದಲ್ಲ, ಪ್ರೀತಿಯಿಂದ ಬದುಕನ್ನು ಅರಳಿಸಬಹುದು ಎಂದು ಹೇಳಿದರು.
ಸಂಸ್ಕೃತಿ ಎಂದರೆ ಬೇರೆ ಬೇರೆ ಧ್ವನಿಗಳ ಸಂಗಮ. ವಿಭಿನ್ನತೆಯಲ್ಲೇ ಏಕತೆಯ ಸುಗಂಧ. ಮಹಾರಾಜರು ಜಯಚಾಮರಾಜೇಂದ್ರ ಒಡೆಯರು ಮುಸ್ಲಿಮರ ನಂಬಿ ಅವರನ್ನು ಅನುಮಾನಿಸದೆ ಅಂಗರಕ್ಷಕರ ಪಡೆಯ ಸದಸ್ಯರನ್ನಾಗಿಸಿದ್ದರು. ಇದು ಬಹಳ ಹೆಮ್ಮೆಯ ಮತ್ತು ಅಪ್ಯಾಯಮಾನ ವಿಷಯ. ಸಂಸ್ಕೃತಿ ಎಂದರೆ ಹೃದಯದಗಲವನ್ನು ಹುಟ್ಟಿಸುವ ನನ್ನ ಧಾರ್ಮಿಕ ನಂಬಿಕೆ, ಯಾವಗಾಗಲೂ ಜೀವ ಪರ ಮಾನವೀಯ ಪರ. ಈ ನೆಲದ ಸಂಸ್ಕೃತಿಯ ಮೂಲ- ಎಲ್ಲರನ್ನೊಳಗೊಳ್ಳುವ ಎಲ್ಲರ ಬದುಕನ್ನು ಗೌರವಿಸುವ, ನಮ್ಮೆಲ್ಲರ ಸರ್ವ ಜನಾಂಗದ ಶಾಂತಿಯ ತೋಟ ಎಂದು ಬಾನು ಹೇಳಿದರು.
ಮೈಸೂರು ದಸರಾ ಶಾಂತಿಯ ಹಬ್ಬ, ಸೌಹಾರ್ದದ ಮೇಳ, ಇದು ಸರ್ವಜನಾಂಗದ ಶಾಂತಿಯ ತೋಟ. ನಾವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸಿ, ಪರಸ್ಪರರ ನಂಬಿಕೆಗಳನ್ನು, ಸಂಸ್ಕೃತಿಗಳನ್ನು ಗೌರವಿಸುವುದರ ಮೂಲಕ ನಮ್ಮ ಬದುಕನ್ನು ಶ್ರೀಮಂತಗೊಳಿಸಬೇಕಿದೆ. ಈ ನೆಲದ ಬಿಸಿಲು ಕೂಡ ಸಾಹಾರ್ದತೆಯಿಂದ ಕೂಡಿದೆ. ಮಾನವೀಯ ಪ್ರೀತಿಯ ಪ್ರತೀಕವಾಗಿದೆ. ಈ ಸಂದರ್ಭದಲ್ಲಿ ಚಾಮುಂಡಿ ತಾಯಿಯ ಮಹಿಮೆ ನಮ್ಮೆಲ್ಲರ ಜೀವನಕ್ಕೆ ಮಾರ್ಗದರ್ಶಕವಾಗಿರಲಿ. ತಾಯಿ ಚಾಮುಂಡಿ ಸತ್ಯ, ಧೈರ್ಯ ಹಾಗೂ ರಕ್ಷಕತ್ವದ ಸಂಕೇತ. ನಮ್ಮೊಳಗಿನ ದ್ವೇಷ, ಅಸಹಿಷ್ಣುತೆ ನಾಶವಾಗಲೆಂದು ಬಯಸುತ್ತೇನೆ. ಈ ದಸರಾ ಹಬ್ಬ ಮೈಸೂರು ನಗರಕ್ಕೆ ಸೀಮಿತವಾಗದೆ ನಮ್ಮ ನಾಡಿಗೆ, ದೇಶಕ್ಕೆ , ಜಗತ್ತಿಗೆ, ಮಾನವ ಕುಲಕ್ಕೆ ಶಾಂತಿ ಸಹಾನುಭೂತಿ, ಪ್ರೀತಿ ಮತ್ತು ನ್ಯಾಯದ ದೀಪವನ್ನು ಬೆಳೆಗಿಸಲೆಂದು ಹಾರೈಸುತ್ತೇನೆ. ಇಂದು ಬೆಳೆಗಿಸಿದ ದೀಪ ಈ ಸಂದೇಶದೊಂದಿಗೆ ಇಡೀ ಪ್ರಪಂಚದಾದ್ಯಂತ ತನ್ನ ನೆಲೆಯನ್ನು ಕಂಡುಕೊಳ್ಳಲಿ ಎಂದು ಆಶಿಸುತ್ತೇನೆ ಎಂದರು.
ನಾವು ಎಲ್ಲರೂ ಒಂದೇ ಗಗನದಡಿಯ ಪಯಣಿಗರು. ಆಕಾಶವು ಯಾರನ್ನೂ ಬೇರ್ಪಡಿಸುವುದಿಲ್ಲ. ಭೂಮಿ ಯಾರನ್ನೂ ತಳ್ಳುವುದಿಲ್ಲ. ಮನುಷ್ಯನು ಮಾತ್ರ ಗಡಿ ಹಾಕುತ್ತಾನೆ. ಆ ಗಡಿಗಳನ್ನು ನಾವೇ ಅಳಿಸಬೇಕು. ಇಂದು ಈ ಹಬ್ಬ ಮೈಸೂರಿನ ಬೀದಿಗಳಲ್ಲಿ ಮಾತ್ರವಲ್ಲ ಇಡೀ ಜಗತ್ತಿನ ಹೃದಯಗಳಲ್ಲಿ ಬೆಳಗಲಿ ಎಂದು ಆಶಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದೆಂದಿಗೂ ಪ್ರಸ್ತುತವಾಗುತ್ತಾರೆ. ಅವರು ಹಂಚಿಕೊಳ್ಳುವ ಮನದ ಅರಸ. ರಾಜಕೀಯ, ಆರ್ಥಿಕ, ಸಾಮಾಜಿಕ ನ್ಯಾಯದ ಔದಾರ್ಯದ ದೊರೆಯಾಗಿದ್ದರು. ಭೇದ ಭಾವಕ್ಕಿಂತ ವಿಶಾಲ ಮನಸ್ಸಿಗೆ ಗೌರವವಿತ್ತು. ಅವರು ನೀಡಿದ ಸಂದೇಶ ಸಂಪತ್ತನ್ನು ಹಂಚಿದಾಗ ಮಾತ್ರ ಅದು ಬೆಳೆಯುತ್ತದೆ. ಶಕ್ತಿಯನ್ನು ಹಂಚಿಕೊಂಡಾಗ ಮಾತ್ರ ದೀರ್ಘಕಾಲ ಬದುಕುತ್ತದೆ ಎಂದರು.