Thursday, February 26, 2026
Menu

ಪೋಕ್ಸೋ ಕೇಸ್, ಮುತ್ಯಾ ಅಜ್ಞಾತ ಸ್ಥಳಕ್ಕೆ: ಬಾಲಕಿ ಪೋಷಕರಿಂದ ಮುತ್ಯಾ ಪರ ಬ್ಯಾಟಿಂಗ್‌

ಶಹಾಪುರ ತಾಲೂಕಿನ ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯ ಮಹಲ್ ರೋಜಾ ಗ್ರಾಮದ ಯಮನೂರಪ್ಪ ಮುತ್ಯಾನ ಮಠದ ಸ್ವಯಂಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ಬಾಲಕಿ ಜೊತೆ ಅನುಚಿತವಾಗಿ ನಡೆದುಕೊಂಡಿರುವ ವೀಡಿಯೋ ವೈರಲ್‌ ಆದ ಬಳಿಕ ಕೇಸ್ ದಾಖಲಾಗುತ್ತಿದ್ದಂತೆಯೇ ಅಜ್ಞಾತ ಸ್ಥಳಕ್ಕೆ ಪರಾರಿಯಾಗಿದ್ದು, ಅಲ್ಲಿಂದ ತಾನು ಎಲ್ಲಿಗೆ ಹೋಗಿದ್ದೇನೆ ಎಂದು ವೀಡಿಯೊ ರಿಲೀಸ್‌ ಮಾಡಿದ್ದಾನೆ.

ಮಹಾರಾಷ್ಟ್ರದ ಸೊಲ್ಲಾಪುರದಿಂದ ಬಾಲಕಿಯ ಪೋಷಕರು ವೀಡಿಯೊ ಹೇಳಿಕೆ ನೀಡಿದ್ದು, ನಮ್ಮ ಕುಟುಂಬ ಮಲ್ಲಿಕಾರ್ಜುನ ಮುತ್ಯಾ ಭಕ್ತರು. ನಾಲ್ಕು ವರ್ಷದಿಂದ ಮಲ್ಲಿಕಾರ್ಜುನ ದರ್ಶನಾಶೀರ್ವಾದ ಪಡೆಯಲು ಹೋಗುತ್ತೇವೆ. ಮಗಳ ಹುಟ್ಟುಹಬ್ಬಕ್ಕೆ ಆಶೀರ್ವಾದ ಪಡೆಯಲು ಕುಟುಂಬಸ್ಥರು ಮಠಕ್ಕೆ ಹೋಗಿದ್ದೇವು. ಆಶೀರ್ವಾದ ಕೊಟ್ಟರು. ನಾವು ಅದನ್ನು ವೀಡಿಯೊ ಮಾಡಿದ್ದೇವೆ. ನಮ್ಮ ಸ್ಟೇಟಸ್ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಆಶೀರ್ವಾದ ಎಂದು ಹಾಕಿದ್ದೇವೆ, ಕಿಡಿಗೇಡಿಗಳು ವೀಡಿಯೊ ತಿರುಚಿ ವೈರಲ್ ಮಾಡಿದ್ದಾರೆ. ಅಪ್ಪಾ ಅವರದ್ದೂ ಏನೂ ತಪ್ಪಿಲ್ಲ, ದೇವರ ಸಮಾನ ಎಂದು ಹೇಳಿದ್ದೇವೆ. ವೀಡಿಯೊ ತಿರುಚಿದವರ ವಿರುದ್ಧ ಕ್ರಮ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಮಠದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡಲು ಈ ಸ್ಥಳಕ್ಕೆ ಬಂದಿದ್ದೇನೆ, ಭಕ್ತರು ಆತಂಕಪಡುವ ಅಗತ್ಯ ಇಲ್ಲ ಎಂದು ವೀಡಿಯೊದಲ್ಲಿ ಮುತ್ಯಾ ಹೇಳಿಕೆ ನೀಡಿದ್ದಾನೆ. ಭಕ್ತರು ಆತನ ಬೆಂಬಲಕ್ಕೆ ನಿಂತಿದ್ದು, ಮಠದತ್ತ ದೌಡಾಯಿಸಿದ್ದಾರೆ. ಈ ನಡುವೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ.

ಈ ವೀಡಿಯೊ ವೈರಲ್ ಆಗ್ತಿದ್ದಂತೆ ಆಕ್ರೋಶ ವ್ಯಕ್ತವಾಗಿದೆ. ಮಕ್ಕಳ ಹಕ್ಕುಗಳ ಆಯೋಗ ದೂರು ದಾಖಲಿಸಿಕೊಂಡು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಯಾದಗಿರಿ ಎಸ್‌ಪಿಗೆ ಸೂಚನೆ ನೀಡಿದೆ. ಪೊಲೀಸರು ಪೋಕ್ಸೋ ಕೇಸ್ ದಾಖಲಿಸಿಕೊಂಡು, ಸ್ಥಳ ಮಹಜರು ನಡೆಸಿದ್ದಾರೆ.

ಬಂಧನದ ಭೀತಿಯಿಂದ ಮುತ್ಯಾ ತಲೆಮರೆಸಿಕೊಂಡಿರುವ ಮಾತು ಕೇಳಿ ಬಂದಿದ್ದು, ಭಕ್ತರು ಇದು ಮುತ್ಯಾ ಮತ್ತು ಮಠದ ಹೆಸರು ಕೆಡಿಸುವ ಕೆಲಸ ಎಂದು ದೂರಿದ್ದಾರೆ. ಪ್ರಕರಣದ ತನಿಖೆಗೆ ಶಹಾಪುರ ಸಿಪಿಐ ಶರಣಗೌಡ ನ್ಯಾಮಣ್ಣನವರ ನೇಮಕ ಮಾಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಮಲ್ಲಿಕಾರ್ಜುನ ಮುತ್ಯಾಗೆ ಪೊಲೀಸರು ನೋಟಿಸ್​ ನೀಡಲಿದ್ದಾರೆ.  ಬಾಲಕಿಯ ಕುತ್ತಿಗೆ ಹಿಡಿದು ಎತ್ತಿ ಮಂಚದ ಮೇಲೆ ನಿಲ್ಲಿಸುವುದು ಸೇರಿದಂತೆ ಆಕೆಗೆ ಚಿವುಟುವ ಜೊತೆಗೆ ಅಸಭ್ಯವಾಗಿ ವರ್ತಿಸಿರುವ ದೃಶ್ಯಗಳಿರುವ ವೀಡಿಯೊ ವೈರಲ್‌ ಆಗಿತ್ತು.

ಆ ಬಾಲಕಿ ನನ್ನ ಮಗಳು ಇದ್ದಂತೆ, ಒಬ್ಬ ತಂದೆ ಮಗಳ ಜೊತೆ ಹೇಗೆ ಇರ್ತಾರೋ ಅದೇ ರೀತಿ ನಾನು ನಡೆದುಕೊಂಡಿದ್ದೇನೆ. ತಂದೆ ಮಗಳನ್ನ ಪ್ರೀತಿ ಮಾಡಲ್ವಾ? ತಂದೆ ಮಗಳನ್ನ ಪ್ರೀತಿ ಮಾಡೋದೇ ತಪ್ಪಾ ಅಂತ  ಮಾಧ್ಯಮವೊಂದರಲ್ಲಿ ಪ್ರತಿಕ್ರಿಯಿಸಿದ್ದರು.

 

Related Posts

Leave a Reply

Your email address will not be published. Required fields are marked *