ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ದೇಸಾಯಿ ಬೋಗಾಪುರ ಗ್ರಾಮದಲ್ಲಿ ಮಂಚಕ್ಕೆ ಬರಲು ನಿರಾಕರಿಸಿದ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ. ಗಂಗಮ್ಮ ಕೊಲೆಯಾದ ಮಹಿಳೆ. ಯಲ್ಲಪ್ಪ ಕೊಲೆ ಆರೋಪಿ. ಪೊಲೀಸರು ಆರೋಪಿ ಯಲ್ಲಪ್ಪನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
2012ರಲ್ಲಿ ಯಲ್ಲಪ್ಪ ಮತ್ತು ಗಂಗಮ್ಮ ಮದುವೆ ನಡೆದಿತ್ತು. ದಂಪತಿಗೆ ಮೂರು ಮಕ್ಕಳಿದ್ದಾರೆ. ದಂಪತಿ ಮಧ್ಯೆ ಪ್ರತಿದಿನವೂ ಸಣ್ಣ-ಪುಟ್ಟ ವಿಚಾರಗಳಿಗೆ ಗಲಾಟೆ ನಡೆಯುತ್ತಿತ್ತು. ಶನಿವಾರ ರಾತ್ರಿಯೂ ಗಂಗಮ್ಮ ಮತ್ತು ಯಲ್ಲಪ್ಪನ ನಡುವೆ ಜಗಳ ನಡೆದಿದೆ. ಪತ್ನಿ ಗಂಗಮ್ಮಳನ್ನು ಮಂಚಕ್ಕೆ ಬರುವಂತೆ ಯಲ್ಲಪ್ಪ ಕರೆದಿದ್ದಾನೆ. ಆದರೆ ಗಂಗಮ್ಮ ಹೋಗಲು ನಿರಾಕರಿಸಿದ್ದಾಳೆ.
ಇದರಿಂದ ಯಲ್ಲಪ್ಪ ಕೋಪಗೊಂಡು ಮನೆಯಲ್ಲಿದ್ದ ಕುಡುಗೋಲು ತೆಗೆದುಕೊಂಡು ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಆರೋಪಿ ಯಲ್ಲಪ್ಪನನ್ನು ಬಂಧಿಸಿದ್ದಾರೆ. ಮದುವೆ ಬಳಿಕ ಗಂಗಮ್ಮ ಗಂಡನೊಂದಿಗೆ ತವರು ಮನೆಯಲ್ಲಿಯೇ ವಾಸವಿದ್ದರು. ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.