ಹಾಸನದ ಅರಸೀಕೆರೆ ತಾಲೂಕಿನ ಡಿಗ್ಗೇನಹಳ್ಳಿ ಗ್ರಾಮದಲ್ಲಿ ಚಿನ್ನದ ಮಾಂಗಲ್ಯ ಸರಕ್ಕಾಗಿ ಮಾವನ ಮಗಳನ್ನು ಕೊಂದು ಹೃದಯಾಘಾತ ಎಂದಬು ಬಿಂಬಿಸಿದ್ದ ಆರೋಪಿಯು ಸತ್ಯ ಬಯಲಾಗುತ್ತಿದ್ದಂತೆಯೇ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಶಕುಂತಲಾ (48) ಕೊಲೆಯಾದ ಮಹಿಳೆ. ಶಿವಮೂರ್ತಿ (55) ಕೊಲೆ ಆರೋಪಿ. ಈ ಕೊಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಶಕುಂತಲಾ ಅವರಿಗೆ ಮಕ್ಕಳಿಲ್ಲ, ಮನೆಯಲ್ಲಿ
ಪತಿಯೊಂದಿಗೆ ವಾಸವಿದ್ದರು. ಆ.20 ರಂದು ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ಶಿವಮೂರ್ತಿ ಬಂದಿದ್ದ. ನಕಲಿ ಚಿನ್ನದ ಸರ ತಂದಿದ್ದ. ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿ 36 ಗ್ರಾಂ ತೂಕದ ಚಿನ್ನದ ಸರ ಎಗರಿಸಿ ನಕಲಿ ಚಿನ್ನದ ಸರ ಹಾಕಿದ್ದ.
ದನ ಮೇಯಿಸಲು ಹೋಗಿದ್ದ ಶಕುಂತಲಾ ಪತಿ ಫಾಲಾಕ್ಷ ವಾಪಸ್ ಮನೆಗೆ ಬಂದಾಗ ಶಕುಂತಲಾ ನೆಲದ ಮೇಲೆ ಬಿದ್ದಿದ್ದರು. ಸುದ್ದಿ ತಿಳಿದು ಗ್ರಾಮಕ್ಕೆ ಬಂದಿದ್ದ ಶಕುಂತಲಾ ಸಹೋದರಿಯರು ಪತಿ ಫಾಲಾಕ್ಷ ವಿರುದ್ಧವೇ ಆರೋಪ ಮಾಡಿದ್ದರು. ಸ್ಥಳಕ್ಕೆ ಬಂದಿದ್ದ ಆರೋಪಿ ಶಿವಮೂರ್ತಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ಸುಳ್ಳು ಸುದ್ದಿ ಹಬ್ಬಿಸಿದ್ದ. ಗ್ರಾಮಸ್ಥರು ಶಿವಮೂರ್ತಿ ಮಾತನ್ನೇ ನಂಬಿದ್ದರು.
ಸಾವಿನ ಬಗ್ಗೆ ಅನುಮಾನಗೊಂಡ ಶಕುಂತಲಾ ಸಂಬಂಧಿಕ 112ಕ್ಕೆ ಕರೆ ಮಾಡಿದ್ದರಿಂದ ಜಾವಗಲ್ ಪೊಲೀಸರು ಆಗಮಿಸಿದ್ದರು. ಈ ವೇಳೆ ಹೃದಯಾಘಾತವಾಗಿದೆ, ಮರಣೋತ್ತರ ಪರೀಕ್ಷೆ ಬೇಡ ಎಂದು ಶಿವಮೂರ್ತಿ ಹೇಳಿದ್ದಾನೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯುತ್ತಿದ್ದಂತೆ ಶಿವಮೂರ್ತಿ ಭಯಗೊಂಡಿದ್ದ. ಗ್ರಾಮದ ಹಲವೆಡೆ ಸಿಸಿಟಿವಿ ಅಳವಡಿಸಿದ್ದು, ಶಿವಮೂರ್ತಿ ಸಿಸಿಟಿವಿ ಇದ್ದ ಕಡೆ ಓಡಾಡುವುದನ್ನೇ ಬಿಟ್ಟಿದ್ದ.
ಪೊಲೀಸ್ ತನಿಖೆ ಚುರುಕುಗೊಳ್ಳತ್ತಿದ್ದಂತೆ ಹೆದರಿದ ಶಿವಮೂರ್ತಿ ಕೊಲೆ ಮಾಡಿದ ಒಂದು ವಾರದಲ್ಲೇ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನಿಖೆ
ಬಳಿಕ ಲೆ ಹಾಗೂ ಆತ್ಮಹತ್ಯೆ ಪ್ರಕರಣದ ಸತ್ಯಾಂಶ ಹೊರಬಿದ್ದಿದೆ. ಕದ್ದ ಮಾಂಗಲ್ಯ ಸರವನ್ನು ಶಿವಮೂರ್ತಿ ಜಾವಗಲ್‌ನ ಜ್ಯುವೆಲರ್ಸ್‌ನಲ್ಲಿ ಅಡವಿಟ್ಟಿದ್ದ. ಪೊಲೀಸರು ಸರವನ್ನು ವಶಕ್ಕೆ ಪಡೆದಿದ್ದಾರೆ. ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.