ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕೆಂಗುಂಟೆ ಗ್ರಾಮದ ಅರಣ್ಯದಲ್ಲಿ ಖಾಸಗಿ ಶಾಲೆಯ ಬಸ್ ನಿರ್ವಾಹಕಿಯ ತಲೆಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ನಡೆದಿದೆ. ಹೊಳಲ್ಕೆರೆ ರಾಮಘಟ್ಟ ಗ್ರಾಮದ ನಿವಾಸಿ ಆಶಾ (25)ಕೊಲೆಯಾದವರು ಎಂದು ಗುರುತಿಸಲಾಗಿದೆ. ಈಕೆ ಹೊಳಲ್ಕೆರೆಯ ಖಾಸಗಿ ಶಾಲೆಯ ಬಸ್ ನಿರ್ವಾಹಕಿಯಾಗಿದ್ದರು.
ಆಶಾ ತನ್ನ ಸ್ನೇಹಿತನಾದ ಅನಿಲಾಸನ್‌ಗೆ 56,000 ರೂಪಾಯಿ ಸಾಲ ನೀಡಿದ್ದರು. ಆದರೆ ಆತ ಸಾಲದ ಹಣ ಹಿಂತಿರುಗಿಸದೆ ಸತಾಯಿಸುತ್ತಿದ್ದ. ಹೀಗಾಗಿ ಆತನೊಂದಿಗೆ ಜಗಳವಾಗಿದ್ದು, ಹಲವು ಬಾರಿ ಸ್ಥಳಿಯರ ಸಮ್ಮುಖದಲ್ಲಿ ರಾಜಿ ಪಂಚಾಯಿತಿ ನಡೆದಿತ್ತು.
ಎರಡು ದಿನಗಳ ಹಿಂದೆ ಹಣ ನೀಡುವುದಾಗಿ ಕರೆ ಮಾಡಿದ್ದ ಅನಿಲಾಸನ್ ಕೆಂಗುಂಟೆ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಹತ್ಯೆ ಮಾಡಿದ್ದಾನೆ. ಅತ್ಯಾಚಾರ ಎಸಗಿರುವ ಶಂಕೆಯೂ ಇದೆ ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ದಿನಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.