ಆಂಧ್ರಪ್ರದೇಶದಲ್ಲಿ ಬಾಪಟ್ಲ ಜಿಲ್ಲೆಯಲ್ಲಿ ಬೆಂಗಳೂರಿನ ಉದ್ಯಮಿಗಳಾದ ತಂದೆ-ಮಗ ಕೆ.ವಿ.ಪ್ರಶಾಂತ್ ರೆಡ್ಡಿ ಹಾಗೂ ವೀರಸ್ವಾಮಿರೆಡ್ಡಿಯ ಕೊಲೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಪ್ರತಿಪಕ್ಷ ನಾಯಕ ಆರ್. ಅಶೋಕ್ ಸಂತಾಪ ವ್ಯಕ್ತಪಡಿಸಿದ್ದು, ಶೀಘ್ರ ಸೂಕ್ತ ತನಿಖೆಗೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಆಂಧ್ರದಲ್ಲಿ ರಾಜ್ಯದ ಇಬ್ಬರು ಬಿಜೆಪಿ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿದ್ದು, ಶೀಘ್ರವೇ ತನಿಖೆಯಾಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರಾಗಿದ್ದ ಕೆ.ವಿ.ಪ್ರಶಾಂತ್ ರೆಡ್ಡಿ ಹಾಗೂ ಅವರ ತಂದೆ ವೀರಸ್ವಾಮಿರೆಡ್ಡಿ ಹತ್ಯೆಗೀಡಾಗಿರುವ ಘಟನೆ ಅಮಾನವೀಯ ಹಾಗೂ ದುಃಖಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ದುರ್ಘಟನೆಯನ್ನು ಖಂಡಿಸಿ, ಮೃತರ ಆತ್ಮಕ್ಕೆ ಶಾಂತಿ ಕೋರುವೆ. ಕೊಲೆಗಡುಕರನ್ನು ಬಂಧಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ತನಿಖೆ ಚುರುಕುಗೊಳಿಸಲಿ ಎಂದು ಆಗ್ರಹಿಸಿದ್ದಾರೆ.
ಮಹದೇವಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತ ಕೆ.ವಿ. ಪ್ರಶಾಂತ್ ರೆಡ್ಡಿ ಹಾಗೂ ಅವರ ತಂದೆ ವೀರಸ್ವಾಮಿರೆಡ್ಡಿ ಅವರ ಹತ್ಯೆ ಮನಸ್ಸಿಗೆ ತೀವ್ರ ಘಾಸಿ ಉಂಟು ಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಭಗವಂತ ಅವರ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಹಂತಕರನ್ನು ಪತ್ತೆ ಹಚ್ಚಿ ಅವರನ್ನು ಬಂಧಿಸಿ ಕಾನೂನಿಗೆ ಒಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತ್ವರಿತ ಕ್ರಮ ಕೈಗೊಂಡು ಈ ಸಾವಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆಂಧ್ರದಲ್ಲಿದ್ದ ವೀರಸ್ವಾಮಿರೆಡ್ಡಿ ಹಾಗೂ ಕೆ.ವಿ.ಪ್ರಶಾಂತ್ ರೆಡ್ಡಿ ಚೆಕ್‌ಬೌನ್ಸ್ ಪ್ರಕರಣ ಸಂಬಂಧ ಕೋರ್ಟ್‌ಗೆ ತೆರಳುತ್ತಿದ್ದರು. ಈ ವೇಳೆ 6 ದುರ್ಷ್ಕಮಿಗಳು ಕಪ್ಪು ಬಣ್ಣದ ಕಾರಿನಲ್ಲಿ ಬಂದು ಇಬ್ಬರನ್ನು ಅಪಹರಿಸಿ ಕತ್ತು ಕೊಯ್ದು ಕೊಲೆ ಮಾಡಿದ್ದಾರೆ.ಜಮೀನು, ಹಣಕಾಸು ವಿಚಾರಕ್ಕೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.