ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ನಡೆದ ಅಬ್ದುಲ್ ರಹೀಂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಜನರ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಘಟನೆಯಲ್ಲಿ ಗಾಯಗೊಂಡ ಕಲಂದರ್ ಶಫಿಯಿಂದ ಪಡೆದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೊಹಮ್ಮದ್ ನಿಸಾರ್ ದಾಖಲಿಸಿದ ದೂರಿನ ಪ್ರಕಾರ, ಅಬ್ದುಲ್ ರಹೀಂ ಮತ್ತು ಕಲಂದರ್ ಶಫಿ ಇಬ್ಬರು ಕುರಿಯಾಳ ಗ್ರಾಮದ ಈರಾಕೋಡಿಯ ರಾಜೀವಿ ಎಂಬವರ ಮನೆ ಬಳಿ ಪಿಕ್‌ಅಪ್ ವಾಹನದಲ್ಲಿ ಮರಳು ಅನ್‌ಲೋಡ್ ಮಾಡುತ್ತಿದ್ದಾಗ ಈ ದಾಳಿ ನಡೆದಿದೆ. ಸ್ಥಳೀಯರ ಕೂಗಾಟದಿಂದ ಆರೋಪಿಗಳು ಶಫಿಯ ಮೇಲಿನ ದಾಳಿಯನ್ನು ಅರ್ಧಕ್ಕೆ ನಿಲ್ಲಿಸಿ ಪರಾರಿಯಾಗಿದ್ದಾರೆ. ಗಾಯಾಳು ಕಲಂದರ್ ಶಫಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಆ್ಯಂಬುಲೆನ್ಸ್‌ನಲ್ಲಿ ಮೊಹಮ್ಮದ್ ನಿಸಾರ್‌ಗೆ ನೀಡಿದ ಮಾಹಿತಿಯ ಆಧಾರದ ಮೇಲೆ ದೂರು ದಾಖಲಾಗಿದೆ.
ಆರೋಪಿಗಳಲ್ಲಿ ಇಬ್ಬರು ಅಬ್ದುಲ್ ರಹೀಂನ ಪರಿಚಯಸ್ಥರಾದ ದೀಪಕ್ ಮತ್ತು ಸುಮಿತ್ ಎಂದು ಗುರುತಿಸಲಾಗಿದೆ. ಬಂಟ್ವಾಳ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 103, 109, 118(1), 118(2), 190, 191(1), 191(2), ಮತ್ತು 191(3) ಅಡಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ತನಿಖೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ಎಸ್‌ಪಿ ಯತೀಶ್ ಐದು ಪೊಲೀಸ್ ತಂಡಗಳನ್ನು ರಚಿಸಿದ್ದಾರೆ. ಡಿವೈಎಸ್‌ಪಿ ವಿಜಯ್ ಪ್ರಕಾಶ್ ನೇತೃತ್ವದ ಈ ತಂಡಗಳಲ್ಲಿ ಮಂಗಳೂರು ನಗರ ಸಿಸಿಬಿ ಮತ್ತು ಬಂಟ್ವಾಳ ಗ್ರಾಮಾಂತರ ಠಾಣೆಯ ಸಿಬ್ಬಂದಿ ಸೇರಿದ್ದಾರೆ. ಪೊಲೀಸರು ಆರೋಪಿಗಳ ಬಗ್ಗೆ ಕೆಲವು ಸುಳಿವುಗಳನ್ನು ಸಂಗ್ರಹಿಸಿದ್ದು, ಆರೋಪಿಗಳನ್ನು ಶೀಘ್ರವಾಗಿ ಬಂಧಿಸಲು ಪೊಲೀಸ್ ತಂಡಗಳು ಸಕ್ರಿಯಗೊಂಡಿವೆ.