ಮುಸ್ಲಿಂ ಯುವತಿಯನ್ನು ಪ್ರೀತಿಸಿದ ಹಿಂದೂ ಯುವಕನನ್ನು ಮುಸ್ಲಿಂ ಯುವಕ ಕೊಲೆ ಮಾಡಿರುವ ಘಟನೆ ಕೊಪ್ಪಳ ನಗರದ ವಾರ್ಡ್ 3ರ ಮಸೀದಿ ಮುಂಭಾಗದಲ್ಲಿ ನಡೆದಿದೆ. ಸಾದಿಕ್ ಕೋಲ್ಕಾರ್ ಎಂಬಾತ ಗವಿಸಿದ್ದಪ್ಪ ನಾಯಕ್ನ ಕೊಲೆ ಮಾಡಿದ್ದಾನೆ. ಗವಿಸಿದ್ದಪ್ಪ ನಾಯಕ್ ತಂದೆ ನಿಂಗಜ್ಜ ಟಣಕನಲ್ ಅವರು ಆರೋಪಿ ಸಾದಿಕ್ ಸೇರಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ.
ಭಾನುವಾರ ರಾತ್ರಿ ಗವಿಸಿದ್ದಪ್ಪನನ್ನು ಕೊಲೆ ಮಾಡಿದ ಸಾದಿಕ್ ನೇರವಾಗಿ ಬಂದು ನಗರ ಠಾಣೆಗೆ ಶರಣಾಗಿದ್ದಾನೆ. ಗವಿಸಿದ್ದಪ್ಪ ಕಳೆದ ಎರಡು ವರ್ಷಗಳಿಂದ ಗೌರಿ ಅಂಗಳ ಏರಿಯಾದ ಅಪ್ರಾಪ್ತ ವಯಸ್ಕ ಮುಸ್ಲಿಂ ಯುವತಿಯನ್ನು ಪ್ರೀತಿಸಿ ಆಕೆಯೊಂದಿಗೆ ಮನೆ ಬಿಟ್ಟು ಹೋಗಿದ್ದ. ನಾಲ್ಕೈದು ಬಾರಿ ಪಂಚಾಯತಿ ಮಾಡಲಾಗಿತ್ತು. ಆದರೂ ಗವಿಸಿದ್ದಪ್ಪ ಹಾಗೂ ಮುಸ್ಲಿಂ ಯುವತಿಯ ಪ್ರೀತಿ ಮುಂದುವರಿದಿತ್ತು. ಹೀಗಾಗಿ ಬಹದ್ದೂರ ಬಂಡಿ ರಸ್ತೆಯಿಂದ ಬರುತ್ತಿದ್ದ ಗವಿ ಸಿದ್ದಪ್ಪನನ್ನು ಅಡ್ಡ ಹಾಕಿ ಕುತ್ತಿಗೆ ಭಾಗಕ್ಕೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಗವಿಸಿದ್ದಪ್ಪ ಪ್ರೀತಿಸುತ್ತಿದ್ದ ಯುವತಿಯನ್ನು ಸಾದಿಕ್ ಪ್ರೀತಿಸುತ್ತಿದ್ದನಂತೆ. ಸಾದಿಕ್ನೊಂದಿಗೆ ಲವ್ ಬ್ರೇಕಪ್ ಮಾಡಿಕೊಂಡ ಯುವತಿ ಗವಿಸಿದ್ದಪ್ಪನನ್ನು ಪ್ರೀತಿಸಲು ಶುರು ಮಾಡಿದ್ದಳು. ಈ ವಿಷಯ ತಿಳಿದ ಸಾದಿಕ್ ಅನೇಕ ಬಾರಿ ಗವಿಸಿದ್ದಪ್ಪನೊಂದಿಗೆ ಜಗಳ ಮಾಡಿದ್ದ. ಈ ವಿಷಯ ಅತಿರೇಕಕ್ಕೆ ಹೋಗಿ ಮಸೀದಿ ಬಳಿ ಬೈಕ್ನಲ್ಲಿ ಬರುತ್ತಿದ್ದ ಗವಿಸಿದ್ದಪ್ಪನನ್ನು ಕೊಲೆ ಮಾಡಿದ್ದಾನೆ. ಎಸ್ಪಿ ಡಾ. ರಾಮ್ ಅರಸಿದ್ದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಮೂಲಗಳ ಪ್ರಕಾರ ಮೂರು ಜನ ಮುಸ್ಲಿಂ ಯುವಕರು ಸೇರಿ ಗವಿಸಿದ್ದಪ್ಪನನ್ನು ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನುಳಿದವರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.
ಭಾನುವಾರ ಕೊಲೆಗೂ ಮುನ್ನ ಸಾದಿಕ್ ಮಚ್ಚು ಹಿಡಿದು ರೀಲ್ಸ್ ಮಾಡಿ ಬಿಲ್ಡಪ್ ಕೊಟ್ಟಿದ್ದ. ತನ್ನ ಇನ್‌ಸ್ಟಾಗ್ರಾಂನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದ. ರಾತ್ರಿ 7.30 ಕ್ಕೆ ಗವಿಸಿದ್ದಪ್ಪನನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದ.