ಬೆಂಗಳೂರು ದಕ್ಷಿಣ ತಾಲೂಕಿನ ಬೋಳಾರೆ ಗ್ರಾಮದ ಬಳಿ 15 ವರ್ಷದ ಬಾಲಕಿಯನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ನಡೆದಿದೆ. ಗುರುವಾರ ಮಧ್ಯಾಹ್ನ ಮನೆಯ ಸಮೀಪ ಬಹಿರ್ದೆಸೆಗೆ ಹೋಗಿದ್ದ ಕವನಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದು ಪತ್ತೆಯಾಗಿದೆ.
ಕವನ ಸಂಜೆಯಾದರೂ ಮನೆಗೆ ವಾಪಸ್ ಬಾರದ ಕಾರಣ ಮನೆಯವರು ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ. ಬಾಲಕಿಯ ತಂದೆ ಬೇರೊಂದು ಮದುವೆಯಾಗಿ ಬೇರೆಡೆ ವಾಸವಿದ್ದರೆ, ತಾಯಿ ಇಲ್ಲ. ಹೀಗಾಗಿ ತನ್ನ ಚಿಕ್ಕಮ್ಮ ಸಾವಿತ್ರಮ್ಮ ಎಂಬವರ ಜೊತೆ ವಾಸವಾಗಿದ್ದಳು.
ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ವೈಯಕ್ತಿಕ ದ್ವೇಷದ ಹಿನ್ನೆಲೆ ಕೊಲೆಯಾಗಿರುವಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಗೆ ಗೂಡ್ಸ್ ವಾಹನ ಡಿಕ್ಕಿಯಾಗಿ ಕಾಲು ಮುರಿತ
ಕಲಬುರಗಿಯ ಜೇವರ್ಗಿ ತಾಲೂಕಿನ ಇಜೇರಿ ಗ್ರಾಮದಲ್ಲಿ ಶಾಲಾ ಬಾಲಕಿ ಮೇಲೆ ಗೂಡ್ಸ್ ವಾಹನ ಹರಿದು ಬಾಲಕಿಯ ಬಲ ಕಾಲು ಭಾಗಶಃ ಕಟ್ ಆಗಿದೆ. ಲಕ್ಷ್ಮೀ ಸಗರ್ (9) ಗಾಯಗೊಂಡ ಬಾಲಕಿ. 3ನೇ ತರಗತಿ ಓದುತ್ತಿರುವ ಲಕ್ಷ್ಮೀ ನೀರು ಕುಡಿಯಲು ಶಾಲೆ ಹೊರಗಡೆ ರಸ್ತೆ ಪಕ್ಕದಲ್ಲಿರುವ ಹ್ಯಾಂಡ್ ಪಂಪ್ ಬಳಿ ಬಂದಾಗ ದುರ್ಘಟನೆ ನಡೆದಿದೆ. ಜೇವರ್ಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


