ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಕುರಿತಾಗಿ ಸಿನಿಮಾ ಮಾಡಲು ಶಾಸಕ ಮುನಿರತ್ನ ಮುಂದಾಗಿದ್ದಾರೆ. ಮೈಸೂರು ಸಂಸ್ಥಾನವನ್ನು ಆಳಿದ್ದ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಕುರಿತಾಗಿ ಹಲವು ಪುಸ್ತಕಗಳು ಈಗಾಗಲೇ ಬಂದಿವೆ. ಇತಿಹಾಸಕಾರ ವಿಕ್ರಮ್ ಸಂಪತ್ ಅವರು ಬರೆದಿರುವ ಪುಸ್ತಕವನ್ನು ಆಧಾರವಾಗಿ ಇಟ್ಟುಕೊಂಡು ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಮುನಿರತ್ನ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
ವಿಕ್ರಮ್ ಸಂಪತ್ ಬರೆದಿರುವ ಈ ಪುಸ್ತಕ ಮೈಸೂರಿನಲ್ಲಿ ಹೈದರ್ ಮತ್ತು ಟಿಪ್ಪು ಆಡಳಿತದಲ್ಲಿನ ಹಲವು ಅಂಶಗಳನ್ನು ಹೊಂದಿದೆ, ಮೈಸೂರನ್ನು ಆಳಿದ್ದ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಬ್ರಿಟಿಷರ ಜೊತೆಗೆ 4 ಯುದ್ಧಗಳನ್ನು ನಡೆಸಿದ್ದರು. ಎರಡನೇ ಆಂಗ್ಲೋ ಮೈಸೂರು ಯುದ್ಧದ ಸಂದರ್ಭದಲ್ಲಿ ಹೈದರ್ ಅಲಿ ಬೆನ್ನಿನಲ್ಲಿ ಆದ ಹುಣ್ಣಿನಿಂದ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದರು. ಬಳಿಕ ಟಿಪ್ಪುಗೆ ಮೈಸೂರಿನ ಸುಲ್ತಾನ್ ಆಗಿ ಪಟ್ಟಾಭಿಷೇಕವಾಗಿತ್ತು. ಹೈದರ್ ಮತ್ತು ಟಿಪ್ಪು ಆಡಳಿತ ಪರ – ವಿರುದ್ಧ ಟೀಕೆ ಟಿಪ್ಪಣಿಗಳಿಗೆ ಕಾರಣವಾಗಿದೆ.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಈ ಹಿಂದೆ ಟಿಪ್ಪು ಜಯಂತಿ ಆಚರಣೆ ಮಾಡಲಾಗಿತ್ತು. ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿ ಕರಾವಳಿ ಮತ್ತು ಮಡಿಕೇರಿಯಲ್ಲಿ ಗಲಭೆ ಉಂಟಾಗಿತ್ತು. ಆಸ್ತಿ- ಪಾಸ್ತಿ ಹಾನಿ ಮತ್ತು ಪ್ರಾಣ ಹಾನಿ ಸಂಭವಿಸಿತ್ತು. ನಂತರ ಸರ್ಕಾರ ಟಿಪ್ಪು ಜಯಂತಿಯನ್ನು ಅಧಿಕೃತವಾಗಿ ಆಚರಣೆ ಮಾಡುವುದನ್ನು ನಿಲ್ಲಿಸಿದೆ.