ಮುಂಬೈ: ಸೂರ್ಯಕುಮಾರ್ ಯಾದವ್ ಸಿಡಿಲಬ್ಬರದ ಅರ್ಧಶತಕ ಮತ್ತು ಜಸ್ ಪ್ರೀತ್ ಬುಮ್ರಾ ಮಾರಕ ದಾಳಿ ನೆರವಿನಿಂದ ಮುಂಬೈ ಇಂಡಿಯನ್ಸ್ 54 ರನ್ ಗಳ ಭಾರೀ ಅಂತರದಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಮಣಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ.
ವಾಂಖೇಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 215 ರನ್ ಗಳಿಸಿತು. ಕಠಿಣ ಗುರಿ ಬೆಂಬತ್ತಿದ ಎಲ್ ಎಸ್ ಜಿ 20 ಓವರ್ ಗಳಲ್ಲಿ 161 ರನ್ ಗೆ ಆಲೌಟಾಯಿತು.
ಮುಂಬೈ 10 ಪಂದ್ಯಗಳಿಂದ 6 ಜಯ ಹಾಗೂ 4 ಸೋಲಿನೊಂದಿಗೆ 12 ಅಂಕ ಸಂಪಾದಿಸಿ 2ನೇ ಸ್ಥಾನಕ್ಕೆ ಜಿಗಿತ ಕಂಡಿದೆ. ಎಲ್ ಎಸ್ ಜಿ 10 ಪಂದ್ಯಗಳಿಂದ 5 ಜಯ ಹಾಗೂ 5 ಸೋಲಿನೊಂದಿಗೆ 10 ಅಂಕದೊಂದಿಗೆ 6ನೇ ಸ್ಥಾನದಲ್ಲಿ ಉಳಿದುಕೊಂಡಿದೆ.
ಕಠಿಣ ಗುರಿ ಬೆಂಬತ್ತಿದ ಎಲ್ ಎಸ್ ಜಿ ಬುಮ್ರಾ ಮತ್ತು ಬೌಲ್ಟ್ ದಾಳಿಗೆ ತತ್ತರಿಸಿತು. ಬ್ರುಮಾ 22 ರನ್ ನೀಡಿ 4 ವಿಕೆಟ್ ಕಬಳಿಸಿದರೆ, ಬೋಲ್ಟ್ 20 ರನ್ ನೀಡಿ 3 ವಿಕೆಟ್ ಪಡೆದರು. ವಿಲ್ ಜಾಕ್ಸ್ 2 ವಿಕೆಟ್ ಪಡೆದರು.
ಎಲ್ ಎಸ್ ಜಿ ತಂಡದ ಪರ ಮಿಚೆಲ್ ಮಾರ್ಷ್ (34), ಆಯುಷ್ ಬದೋನಿ (35), ನಿಕೊಲಸ್ ಪೂರನ್ (27) ಮತ್ತು ಡೇವಿಡ್ ಮಿಲ್ಲರ್ (24) ಮಾತ್ರ ತಕ್ಕಮಟ್ಟಿಗೆ ಹೋರಾಟ ನಡೆಸಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮ ವಿಕೆಟ್ ಬೇಗ ಕಳೆದುಕೊಂಡರೂ ರಿಯಾನ್ ರಿಕಲ್ಟನ್ (58 ರನ್, 32 ಎಸೆತ, 6 ಬೌಂಡರಿ, 4 ಸಿಕ್ಸರ್) ಮತ್ತು ಸೂರ್ಯ ಕುಮಾರ್ ಯಾದವ್ 28 ಎಸೆತಗಳಲ್ಲಿ 4 ಬೌಂಡರಿ ಮತ್ತು ಸಿಕ್ಸರ್ ನೊಂದಿಗೆ 54 ರನ್ ಸಿಡಿಸಿ ತಂಡದ ಮೊತ್ತ 200ರ ಗಡಿ ದಾಟಿಸಿದರು.