ಮುಂಬೈ: ಸರ್ವಾಂಗೀಣ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ 6 ವಿಕೆಟ್ ಗಳಿಂದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಐಪಿಎಲ್ ಟಿ-20 ಟೂರ್ನಿಯಲ್ಲಿ ಪ್ಲೇಆಫ್ ಆಸೆಯನ್ನು ಮತ್ತಷ್ಟು ಉತ್ತಮಪಡಿಸಿಕೊಂಡಿದೆ.
ವಾಂಖೇಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಸನ್ ರೈಸರ್ಸ್ ಹೈದರಾಬಾದ್ ತಂಡ 20 ಓವರ್ ಗಳಲ್ಲಿ 5 ವಿಕೆಟ್ ಗೆ 162 ರನ್ ಕಲೆಹಾಕಿತು. ಸಾಧಾರಣ ಮೊತ್ತದ ಗುರಿ ಬೆಂಬತ್ತಿದ ಮುಂಬೈ ಇಂಡಿಯನ್ಸ್ 17 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಐಪಿಎಲ್ ನಲ್ಲಿ ಅತೀ ದೊಡ್ಡ ಮೊತ್ತ ಯಶಸ್ವಿಯಾಗಿ ಬೆಂಬತ್ತಿದ ದಾಖಲೆ ಬರೆದಿದ್ದ ದೈತ್ಯ ಬ್ಯಾಟಿಂಗ್ ಬಲ ಹೊಂದಿರುವ ಎಸ್ ಆರ್ ಎಚ್ ಉತ್ತಮ ಆರಂಭದ ಹೊರತಾಗಿಯೂ ರನ್ ಗಳಿಸಲು ಪರದಾಟ ನಡೆಸಿ ಸೋಲುಂಡಿತು. ಆರಂಭದಿಂದಲೂ ಒತ್ತಡ ನಿಭಾಯಿಸಿಕೊಂಡು ಬಂದ ಮುಂಬೈ ಇಂಡಿಯನ್ಸ್ ಸುಲಭ ಗೆಲುವು ದಾಖಲಿಸಿತು.
ಮುಂಬೈ ಇಂಡಿಯನ್ಸ್ ಗೆ ಇದು 7 ಪಂದ್ಯಗಳಲ್ಲಿ 4 ಸೋಲು, 3ನೇ ಜಯವಾಗಿದ್ದು, 6 ಅಂಕದೊಂದಿಗೆ 7ನೇ ಸ್ಥಾನದಲ್ಲಿ ಉಳಿದುಕೊಂಡರೆ, ಇಷ್ಟೇ ಪಂದ್ಯಗಳಿಂದ ಎಸ್ ಆರ್ ಎಚ್ 2 ಜಯ ಹಾಗೂ 5ನೇ ಸೋಲಿನೊಂದಿಗೆ 4 ಅಂಕದೊಂದಿಗೆ ಕೊನೆಯ ಸ್ಥಾನದಲ್ಲಿರುವ ಚೆನ್ನೈಗಿಂತ ಒಂದು ಸ್ಥಾನ ಮೇಲಿದೆ.
ಮುಂಬೈ ಇಂಡಿಯನ್ಸ್ ಗೆ ಮಾಜಿ ನಾಯಕ ರೋಹಿತ್ ಶರ್ಮ 16 ಎಸೆತಗಳಲ್ಲಿ 3 ಸಿಕ್ಸರ್ ಸೇರಿದ 26 ರನ್ ಸಿಡಿಸಿ ಸ್ಫೋಟಕ ಆರಂಭ ನೀಡಿದರೆ, ರಿಕಲ್ಟನ್ (31), ವಿಲ್ ಜಾಕ್ಸ್ (36), ಸೂರ್ಯಕುಮಾರ್ ಯಾದವ್ (26), ತಿಲಕ್ ವರ್ಮಾ (ಅಜೇಯ 21) ಮತ್ತು ಹಾರ್ದಿಕ್ ಪಾಂಡ್ಯ (21 ರನ್, 9 ಎಸೆತ, 3 ಬೌಂಡರಿ, 1 ಸಿಕ್ಸರ್) ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದರು.
ಮುಂಬೈ ಇಂಡಿಯನ್ಸ್ ಗೆಲುವಿನ 1 ರನ್ ಬಾರಿಸಲು ಒಂದು ಓವರ್ ತೆಗೆದುಕೊಂಡಿದ್ದೂ ಅಲ್ಲದೇ 2 ವಿಕೆಟ್ ಕಳೆದುಕೊಂಡು ನಾಟಕೀಯವಾಗಿ ಗೆದ್ದುಕೊಂಡಿತು. ಇಶಾನ್ ಮಲಿಂಗ ಒಂದೂ ರನ್ ನೀಡದೇ 2 ವಿಕೆಟ್ ಪಡೆದು ಗಮನ ಸೆಳೆದರೆ, ನಾಯಕ ಪ್ಯಾಟ್ ಕಮಿನ್ಸ್ 3 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಎಸ್ ಆರ್ ಎಚ್ ತಂಡಕ್ಕೆ ಅಭಿಷೇಕ್ ಶರ್ಮ (40) ಮತ್ತು ಟ್ರಾವಿಸ್ ಹೆಡ್ (28) ಮೊದಲ ವಿಕೆಟ್ ಗೆ 59 ರನ್ ಪೇರಿಸಿ ಉತ್ತಮ ಆರಂಭ ದೊರಕಿಸಿಕೊಟ್ಟರು. ಆದರೆ ನಂತರ ಬಂದ ಬ್ಯಾಟ್ಸ್ ಮನ್ ಗಳು ರನ್ ಗಳಿಸಲು ಪರದಾಡಿದ್ದರಿಂದ ಬೃಹತ್ ಮೊತ್ತ ಪೇರಿಸಲು ವಿಫಲವಾಯಿತು.
ಕೆಳ ಕ್ರಮಾಂಕದಲ್ಲಿ ಹೆನ್ರಿಚ್ ಕ್ಲಾಸೆನ್ (28 ಎಸೆತ, 3 ಬೌಂಡರಿ ಮತ್ತು 2 ಸಿಕ್ಸರ್) 37 ರನ್ ಸಿಡಿಸಿದರೆ, ಅಂಕಿತ್ ವರ್ಮಾ 8 ಎಸೆತಗಳಲ್ಲಿ 2 ಸಿಕ್ಸರ್ ಸಹಾಯದಿಂದ 18 ರನ್ ಬಾರಿಸಿ ತಂಡವನ್ನು ಸ್ಪರ್ಧಾತ್ಮಕ ಮೊತ್ತದತ್ತ ತಂದು ನಿಲ್ಲಿಸಿದರು.