ನವದಹಲಿ: ಸಂಘಟಿತ ಪ್ರದರ್ಶನ ನೀಡಿದ ಮುಂಬೈ ಇಂಡಿಯನ್ಸ್ 12 ರನ್ ಗಳಿಂದ ಸೋಲರಿಯದ ತಂಡವಾಗಿ ಮುನ್ನುಗ್ಗುತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮೊದಲ ಬಾರಿ ಸೋಲಿನ ರುಚಿ ತೋರಿಸಿದೆ. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ಕೂಡ ಸೋಲಿನ ಸರಪಳಿ ಕಳಚಿಕೊಂಡಿತು.
ದೆಹಲಿಯಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 205 ರನ್ ಪೇರಿಸಿತು. ಕಠಿಣ ಗುರಿ ಬೆಂಬತ್ತಿದ ಡೆಲ್ಲಿ ಕ್ಯಾಪಿಟಲ್ಸ್ 19 ಓವರ್ ಗಳಲ್ಲಿ 193 ರನ್ ಗೆ ಆಲೌಟಾಯಿತು.
ಡೆಲ್ಲಿ ತಂಡ ಜ್ಯಾಕ್ ಫ್ರೇಜರ್ (0) ಖಾತೆ ತೆರೆಯುವ ಮುನ್ನವೇ ಔಟಾದರು. ಐಪಿಎಲ್ ನಲ್ಲಿ ಹಲವು ವರ್ಷಗಳ ನಂತರ ಮೊದಲ ಬಾರಿ ಅಖಾಡಕ್ಕೆ ಇಳಿದ ಕರ್ನಾಟಕದ ಕರುಣ್ ನಾಯರ್ 40 ಎಸೆತಗಳಲ್ಲಿ 12 ಬೌಂಡರಿ ಮತ್ತು 5 ಸಿಕ್ಸರ್ ಸೇರಿದ 89 ರನ್ ಬಾರಿಸಿ ಗಮನ ಸೆಳೆದರು. ಆದರೆ ಉಳಿದ ಯಾವುದೇ ಬ್ಯಾಟ್ಸ್ ಮನ್ ನೆಲಕಚ್ಚಿ ಆಡಲು ವಿಫಲರಾಗಿ ಗೆಲುವಿನ ಹೊಸ್ತಿಲಲ್ಲಿ ಎಡವಿತು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ಅಗ್ರ ಕ್ರಮಾಂಕದ ಬ್ಯಾಟ್ಸ್ ಮನ್ ಗಳ ಸಾಧಾರಣ ಪ್ರದರ್ಶನದ ಹೊರತಾಗಿಯೂ ಬೃಹತ್ ಮೊತ್ತ ಪೇರಿಸಿತು.
ಮಾಜಿ ನಾಯಕ ರೋಹಿತ್ ಶರ್ಮ (18) ಮತ್ತು ರಿಯಾನ್ ರಿಕಲ್ಟನ್ (41) ಮೊದಲ ವಿಕೆಟ್ ಗೆ 47 ರನ್ ಜೊತೆಯಾಟದಿಂದ ಉತ್ತಮ ಆರಂಭ ನೀಡಿದರು. ನಂತರ ಸೂರ್ಯಕುಮಾರ್ ಯಾದವ್ (40) ಮತ್ತು ತಿಲಕ್ ವರ್ಮಾ (59) ಉತ್ತಮ ಪ್ರದರ್ಶನ ನೀಡಿ ತಂಡವನ್ನು ಮಧ್ಯಮ ಕ್ರಮಾಂಕದಲ್ಲಿ ಆಧರಿಸಿದರು.
ಈ ಹಂತದಲ್ಲಿ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದರೂ ನಮನ್ ದಿರ್ 17 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ನೊಂದಿಗೆ 38 ರನ್ ಸಿಡಿಸಿ ತಂಡದ ಮೊತ್ತ 200ರ ಗಡಿ ದಾಟಿಸಿದರು. ವಿಪ್ರಾಜ್ ನಿಗಮ್ ಮತ್ತು ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದು ಗಮನ ಸೆಳೆದರು.