ಮುಳಬಾಗಿಲು ತಾಲೂಕಿನ ಮುಡಿಯನೂರು ಗ್ರಾಮದಲ್ಲಿ ಪತ್ನಿ ಕಾಣೆಯಾಗಿದ್ದಕ್ಕೆ ಮನನೊಂದ ಪತಿ ಐದು ವರ್ಷದ ಮಗಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮುಡಿಯನೂರು ಗ್ರಾಮದ ಲೋಕೇಶ್ (37) ಮಗಳು ನಿಹಾರಿಕಾ(5)ಳನ್ನು ಉಸಿರು ಗಟ್ಟಿಸಿ ಕೊಂದು ದೇಹವನ್ನು ಕಾರಿನಲ್ಲಿಟ್ಟು, ಅದೇ ಸ್ಥಳದಲ್ಲಿದ್ದ ತಾನು ಮರಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ.
ಮುಡಿಯನೂರು ಸಮೀಪದ ಪಿಯು ಕಾಲೇಜು ಎದುರು ಈ ಘಟನೆ ನಡೆದಿದ್ದು, ಸ್ಥಳೀಯರು ಮೃತ ದೇಹಗಳನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.
ಲೋಕೇಶ್ ಅವರ ಪತ್ನಿ ನವ್ಯಶ್ರಿ ಕೆಲವು ದಿನಗಳಿಂದ ಕಾಣೆಯಾಗಿದ್ದರು. ಪತ್ನಿ ಕಾಣೆಯಾಗಿದ್ದಕ್ಕೆ ಲೋಕೇಶ್ ಮಾನಸಿಕವಾಗಿ ನೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹಗಳನ್ನು ಪರೀಕ್ಷೆಗಾಗಿ ಕೋಲಾರದ ಆಸ್ಪತ್ರೆಗೆ ಸಾಗಿಸಲಾಗಿದೆ.
ವೈದ್ಯೆಯ ಕೊಂದು ಚಿನ್ನ ದೋಚಿದ ದಂಪತಿ
ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಒಬ್ಬ ವೈದ್ಯೆಯನ್ನು ಕೊಂದು ಚಿನ್ನಾಭರಣಗಳನ್ನು ದೋಚಿದ ಆರೋಪಿಗಳಾದ ಬಾಡಿಗೆದಾರ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸುಬ್ರಹ್ಮಣ್ಯಪುರ ಠಾಣಾ ಪೊಲೀಸರು ಮಹಾರಾಷ್ಟ್ರ ಮೂಲದ ಪ್ರಸಾದ್ ಶ್ರೀಶೈಲ (26) ಮತ್ತು ಅವರ ಪತ್ನಿ ಸಾಕ್ಷಿ (23) ಬಂಧಿತ ಆರೋಪಿಗಳು.
ಉತ್ತರಹಳ್ಳಿಯ ನಿವಾಸಿ ವೈದ್ಯೆ ಶ್ರೀಲಕ್ಷ್ಮಿ (55) ಹತ್ಯೆಯಾದವರು. ಆರೋಪಿ ದಂಪತಿ ಆರು ತಿಂಗಳಿಂದ ಶ್ರೀಲಕ್ಷ್ಮಿ ಅವರ ಮನೆಯಲ್ಲಿ ಬಾಡಿಗೆದಾರರಾಗಿ ವಾಸಿಸುತ್ತಿದ್ದರು. ಪ್ರಸಾದ್ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರೆ, ಸಾಕ್ಷಿ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ಘಟನೆಯ ನಂತರವೂ ಪ್ರಸಾದ್ ಮತ್ತು ಸಾಕ್ಷಿ ಮನೆಯಲ್ಲೇ ಇದ್ದು, ತಮಗೆ ಏನೂ ಗೊತ್ತಿಲ್ಲ ಎಂಬಂತೆ ನಟಿಸಿದ್ದರು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಿಚಾರಣೆ ನಡೆಸುವಾಗ ಆರೋಪಿಗಳು ಸಂಶಯಾಸ್ಪದವಾಗಿ ವರ್ತಿಸಿದ್ದಾರೆ.
ಮುಂದುವರಿದ ಪೊಲೀಸರ ತನಿಖೆಯಲ್ಲಿ ಆರೋಪಿ ದಂಪತಿ ತಾವೇ ಶ್ರೀಲಕ್ಷ್ಮಿ ಅವರನ್ನು ಕೊಂದು ಚಿನ್ನದ ಆಭರಣಗಳನ್ನು ದೋಚಿದ್ದಾಗಿ ಒಪ್ಪಿಕೊಂಡಿದ್ದಾರೆ.


