ಬಹಳ ಕುತೂಹಲ ಮೂಡಿಸಿರುವ ಕನ್ನಡದ ಖ್ಯಾತ ಯೂಟ್ಯೂಬರ್ ಕ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ ಮದುವೆ ಸುದ್ದಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ನನ್ನ ವಿವಾಹ ಪ್ರೇಮದಿಂದಾಗಿದೆ, ಯಾರ ಒತ್ತಡವೂ ಇಲ್ಲ ಎಂದು ಮುಕಳೆಪ್ಪ ಪತ್ನಿ ಗಾಯತ್ರಿ ಸ್ಪಷ್ಟಪಡಿಸಿದ ಕೆಲವೇ ಕ್ಷಣಗಳಲ್ಲಿ, ಆಕೆಯ ಪೋಷಕರು ಮಾಧ್ಯಮಗಳ ಮುಂದೆ ಬಂದು ಕಣ್ಣೀರು ಹಾಕುತ್ತಾ, ನಮ್ಮ ಮಗಳನ್ನು ಬ್ರೈನ್‌ವಾಶ್ ಮಾಡಿದ್ದಾರೆ, ಎಂದು ಆರೋಪಿಸಿದ್ದಾರೆ. ಇದರಿಂದ ಯಾರ ಮಾತು ಸತ್ಯ, ಯಾರ ಮಾತು ಸುಳ್ಳು ಎಂಬ ಚರ್ಚೆ ಜೋರಾಗಿದೆ.
ಮುಕಳೆಪ್ಪ ವಿರುದ್ದ ಲವ್ ಜಿಹಾದ್ ಆರೋಪ ಮಾಡಿರುವ ಗಾಯತ್ರಿ ಅವರ ತಂದೆ ತಾಯಿ, ಮುಕಳೆಪ್ಪ ಮೋಸ ಮಾಡಿದ್ದಾನೆ ಎಂದು ಆರೋಪವನ್ನು ಕೂಡ ಮಾಡಿದ್ದಾರೆ. ತಂಗಿ ಎಂದು ಕರೆದು ಮದುವೆಯಾದ ಎಂದು ಕಣ್ಣೀರು ಹಾಕುತ್ತಿದ್ದಾರೆ.
ಯೂಟ್ಯೂಬರ್ ಮುಕಳೆಪ್ಪ ದಂಪತಿ ತಮ್ಮ ಪ್ರೇಮ ವಿವಾಹದ ಕುರಿತು ಮೊದಲ ರಿಯಾಕ್ಷನ್ ನೀಡಿದ್ದು ‘ಲವ್ ಜಿಹಾದ್’ ಆರೋಪವನ್ನು ತಳ್ಳಿಹಾಕಿದ್ದಾರೆ.
‘ನನ್ನ ಮದುವೆಯನ್ನು ಕೆಲವರು ‘ಲವ್ ಜಿಹಾದ್’ ಎಂದು ಬಿಂಬಿಸುತ್ತಿದ್ದಾರೆ. ಆದರೆ ಇದು ಸಂಪೂರ್ಣ ಸುಳ್ಳು. ನಾವು ಇಬ್ಬರೂ ಪರಸ್ಪರ ಇಷ್ಟಪಟ್ಟು 3 ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದೇವೆ’ ಎಂದು ಹೇಳಿದ್ದಾರೆ. ಅಲ್ಲದೆ, ‘ನಾವಿಬ್ಬರೂ ನಮ್ಮ ನಮ್ಮ ಧರ್ಮವನ್ನು ಪಾಲಿಸುತ್ತೇವೆ. ನಾನು ಹುಟ್ಟಿದ ಧರ್ಮದಲ್ಲೇ ಇರುತ್ತೇನೆ, ನನ್ನ ಪತ್ನಿ ಹುಟ್ಟಿದ ಧರ್ಮದಲ್ಲೇ ಇರುತ್ತಾಳೆ. ನಾವು ಯಾರೂ ಮತಾಂತರಗೊಂಡಿಲ್ಲ’ ಎಂದು ಮುಕಳೆಪ್ಪ ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದಾರೆ.
‘ಕಲಾವಿದರನ್ನು ಜಾತಿ-ಧರ್ಮದ ತಾರತಮ್ಯದಲ್ಲಿ ನೋಡಬೇಡಿ. ನಾನು ಕರ್ನಾಟಕದಲ್ಲಿ ಹುಟ್ಟಿದ್ದೇನೆ ಅಂದರೆ ನಾನು ಕೂಡ ಕನ್ನಡ ಹಿಂದೂನೇ. ಯಾರೂ ನಮ್ಮ ಬಗ್ಗೆ ಸುಳ್ಳು ವಿಡಿಯೊಗಳನ್ನು ಮಾಡಿ ಕಿರಿಕಿರಿ ಮಾಡಬೇಡಿ. ದಯವಿಟ್ಟು ನಮ್ಮನ್ನು ನೆಮ್ಮದಿಯಿಂದ ಬದುಕಲು ಬಿಡಿ’, ಎಂದು ಮನವಿ ಮಾಡಿಕೊಂಡಿದ್ದಾರೆ.
‘ನಾನು ಯಾವಾಗಲೂ ಹಿಂದೂ ಆಗಿಯೇ ಇದ್ದೇನೆ. ನನ್ನ ಗಂಡ ಮುಕಳೆಪ್ಪ ನನ್ನನ್ನು ಬಲವಂತವಾಗಿ ಮತಾಂತರ ಮಾಡಿಸುತ್ತಿದ್ದಾರೆ ಎಂಬ ಸುದ್ದಿ ಸಂಪೂರ್ಣ ಸುಳ್ಳು, ಇದನ್ನು ಯಾರೂ ನಂಬಬೇಡಿ. ಮುಕಳೆಪ್ಪನನ್ನು ನೀವು ಇಷ್ಟು ದಿನ ಹೇಗೆ ನೋಡಿಕೊಂಡಿದ್ದೀರೋ, ಅದೇ ರೀತಿ ನೋಡಿ. ನಾವು ಒಪ್ಪಿ ಮದುವೆಯಾಗಿದ್ದೇವೆ, ಯಾರೂ ನಮ್ಮ ಮನಸ್ಸನ್ನು ಬದಲಿಸಿಲ್ಲ. ದಯವಿಟ್ಟು ನಮ್ಮಿಬ್ಬರನ್ನು ಬದುಕಲು ಬಿಡಿ’ ಎಂದು ಮುಕಳೆಪ್ಪ ಪತ್ನಿ ಗಾಯತ್ರಿ ಹೇಳಿದ್ದಾರೆ.