Menu

ಮೂಡಿಗೆರೆ ವಲಸೆ ಕಾರ್ಮಿಕರ ಗುರುತು ಚೀಟಿ ಪರಿಶೀಲನೆ: ಹಿಂದೂ ಕಾರ್ಯಕರ್ತರ ವಿರುದ್ಧ ಎಫ್‌ಐಆರ್‌

ಚಿಕ್ಕಮಗಳೂರಿನ ಮೂಡಿಗೆರೆ ಪಟ್ಟಣದಲ್ಲಿ ಅಸ್ಸಾಂ ಮೂಲದ ಕಾರ್ಮಿಕರೆಂದು ಹೇಳಿಕೊಂಡು ಬಾಂಗ್ಲಾದೇಶದ ಅಕ್ರಮ ವಲಸಿಗರು ಆಶ್ರಯ ಪಡೆದಿದ್ದಾರೆ ಎಂದು ಆರೋಪಿಸಿ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಆಧಾರ್ ಕಾರ್ಡ್ ಹಾಗೂ ಗುರುತಿನ ಚೀಟಿಗಳನ್ನು ಪರಿಶೀಲಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.

ಪೊಲೀಸರು ಬಜರಂಗದಳ ಮುಖಂಡ ಸುದೇವ್, ಸಂತೋಷ್ ಸೇರಿದಂತೆ ಒಟ್ಟು ಒಂಬತ್ತು ಕಾರ್ಯಕರ್ತರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮೂಡಿಗೆರೆ ಪಟ್ಟಣದ ವಾರದ ಸಂತೆಗೆ ಕಾರ್ಯಕರ್ತರು ಏಕಾಏಕಿ ಪ್ರವೇಶಿಸಿ ಅಸ್ಸಾಂ ಮೂಲದ ಕಾರ್ಮಿಕರ ಆಧಾರ್ ಕಾರ್ಡ್ ಸೇರಿದಂತೆ ಗುರುತಿನ ದಾಖಲೆಗಳನ್ನು ಪರಿಶೀಲಿಸಿದ್ದು, ಸಾರ್ವಜನಿಕ ವಲಯದಲ್ಲಿ ಗೊಂದಲ, ಆತಂಕ ಸೃಷ್ಟಿಯಾಗಿತ್ತು.

ಬಾಂಗ್ಲಾದೇಶದಲ್ಲಿ ಹಿಂದೂವಿನ ಹತ್ಯೆ ನಡೆದ ಹಿನ್ನೆಲೆ, ಬಜರಂಗದಳ ಮತ್ತು ವಿಹೆಚ್‌ಪಿ ನಾಯಕರು ಪತ್ರಿಕಾಗೋಷ್ಠಿ ನಡೆಸಿ, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಇರುವ ಅಸ್ಸಾಂ ಕಾರ್ಮಿಕರ ದಾಖಲೆಗಳನ್ನು ಪರಿಶೀಲಿಸುವಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದರು.

ಗಡುವು ಮುಗಿದರೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕ್ರಮ ಕೈಗೊಂಡಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ತಾವೇ ವಲಸೆ ಕಾರ್ಮಿಕರ ಗುರುತು ಚೀಟಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಸಾವಿರಾರು ಅಸ್ಸಾಂ ಕಾರ್ಮಿಕರು ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿದ್ದಾರೆ. ಕೆಲವರು ನಕಲಿ ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್ ಪಡೆದಿದ್ದಾರೆ ಎಂಬ ಆರೋಪವೂ ಕೇಳಿಬಂದಿದ್ದು, ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಮೂಡಿಗೆರೆ ಪಟ್ಟಣದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಪ್ರಕರಣದ ಕುರಿತು ಪೊಲೀಸ್ ಇಲಾಖೆ ತನಿಖೆ ಮುಂದುವರಿಸಿದೆ.

Related Posts

Leave a Reply

Your email address will not be published. Required fields are marked *