ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಮಾಜಿ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಅಧಿಕಾರಾವಧಿಯಲ್ಲಿ 140 ಕೋಟಿ ರೂ. ಮೌಲ್ಯದ 283 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ್ದು, 22.47 ಕೋಟಿ ರೂ. ಲಂಚ ಪಡೆದಿರುವ ವಿಚಾರ ಇಡಿ ತನಿಖೆಯಲ್ಲಿ ಹೊರ ಬಿದ್ದಿದೆ.
2002 ರ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಯಡಿ ನಡೆದ ತನಿಖೆಯಲ್ಲಿ, 700 ಕೋಟಿ ರೂ. ಮೌಲ್ಯದ 1,095 ಅಕ್ರಮ ನಿವೇಶನಗಳನ್ನು ಮಾರಾಟ ಮಾಡಿರುವುದು ಪತ್ತೆಯಾಗಿದೆ. ದಿನೇಶ್ ಕುಮಾರ್ ಹಗರಣಗಳ ಸೂತ್ರಧಾರಿಗಳಲ್ಲಿ ಒಬ್ಬರು, ಅಕ್ರಮ ಹಂಚಿಕೆ ಮಾಡಿದ್ದಕ್ಕಾಗಿ ಅವರು ನಗದು, ಚರ ಮತ್ತು ಸ್ಥಿರ ಆಸ್ತಿ ಪ್ರತಿಫಲ ಪಡೆದಿದ್ದಾರೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.
ದಿನೇಶ್ ಕುಮಾರ್ ಪಡೆದ 22.47 ಕೋಟಿ ರೂ. ಲಂಚದಲ್ಲಿ 34.65 ಲಕ್ಷ ರೂ. ನಗದು ಆಗಿದ್ದು, ಭದ್ರತಾ ಬಾಂಡ್ ಪೇಪರ್‌ಗಳನ್ನು ದುರುಪಯೋಗಪಡಿಸಿಕೊಂಡು 8.28 ಕೋಟಿ ರೂ. ಗಳಿಸಿದ್ದಾರೆ, ಚಾಮುಂಡೇಶ್ವರಿ ನಗರ ಸರ್ವೋದಯ ಸಂಘದ ಸದಸ್ಯರ ಮೂಲಕ 5.86 ಕೋಟಿ ರೂ., ಅಬ್ದುಲ್ ವಹೀದ್ ಅವರಿಂದ 3.62 ಕೋಟಿ ರೂ., ಕ್ಯಾಥೆಡ್ರಲ್ ಪ್ಯಾರಿಷ್ ಸೊಸೈಟಿಯಿಂದ 1.70 ಕೋಟಿ ರೂ., ನಿಂಗಮ್ಮ ಅವರಿಂದ 1.13 ಕೋಟಿ ರೂ., ಜೆಎಸ್‌ಎಸ್ ಮಹಾವಿದ್ಯಾಪೀಠ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಿಂದ 1.02 ಕೋಟಿ ರೂ. ಮತ್ತು ನಿಂಗಮ್ಮ ಅವರಿಂದ 49 ಲಕ್ಷ ರೂ. ಅಕ್ರಮವಾಗಿ ಹಂಚಿಕೆ ಮಾಡಿದ ಪರಿಹಾರ ನಿವೇಶನಗಳಿಗೆ ರಿಟರ್ನ್ಸ್ ಪಡೆದಿದ್ದಾರೆ ಎಂದು ಇಡಿ ಹೇಳಿದೆ.
ಮುಡಾ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಡಾ ಮಾಜಿ ಆಯುಕ್ತರಾಗಿದ್ದ ಜಿ.ಟಿ.ದಿನೇಶ್ ಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯವು ಪ್ರಾಸಿಕ್ಯೂಷನ್ ದೂರು ದಾಖಲಿಸಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿರುವ ಇಡಿ, ದಿನೇಶ್ ಕುಮಾರ್ ಅಧಿಕಾರ ದುರುಪಯೋಗ ಮಾಡಿಕೊಂಡು ಅಕ್ರಮವಾಗಿ ನೂರಾರು ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ. ನಾನಾ ರೂಪದಲ್ಲಿ ಲಂಚ ಸ್ವೀಕರಿಸಿರುವ ಅವರು ಲಂಚವನ್ನು ಸಂಬಂಧಿಕರು, ಸಹಚರರ ಬ್ಯಾಂಕ್ ಖಾತೆ ಮೂಲಕ ವರ್ಗಾಯಿಸಿರುವ ಕುರಿತು ಪುರಾವೆಗಳೂ ಇವೆ ಎಂದು ಇಡಿ ತಿಳಿಸಿದೆ.


