ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಗಾಯಕಿ, ಭರತನಾಟ್ಯ ಕಲಾವಿದೆ ಶಿವಶ್ರೀ ಸ್ಕಂದ ಪ್ರಸಾದ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಬೆಂಗಳೂರಿನ ಹೆಸರಘಟ್ಟ ಸಮೀಪದ ರೆಸಾರ್ಟ್ನಲ್ಲಿ ತೇಜಸ್ವಿ ಸೂರ್ಯ ಹಾಗೂ ಶಿವಶ್ರೀ ಸ್ಕಂದ ಪ್ರಸಾದ್ ವಿವಾಹ ಮಹೋತ್ಸವ ನೆರವೇರಿತು. ರಾಜಕೀಯ ಮುಖಂಡರು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನವಜೋಡಿಗಳಿಗೆ ಶುಭ ಹಾರೈಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ವಿ ಸೋಮಣ್ಣ, ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಬಿಜೆಪಿ ಶಾಸಕರು, ಸಂಸದರು, ಹಿಂದೂಪರ ಸಂಘಟನೆ ನಾಯಕರು ಸೇರಿದಂತೆ ಇನ್ನಿತರರು ಭಾಗಿಯಾಗಿ ಶುಭ ಕೋರಿದರು.
ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಅವರು ಚೆನ್ನೈ ಮೂಲದ ಹೆಸರಾಂತ ಗಾಯಕಿ, ಭರತನಾಟ್ಯ ಪ್ರವೀಣೆ ಹಾಗೂ ಬಿಟೆಕ್ ಪದವೀಧರೆಯಾಗಿದ್ದಾರೆ. ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ಸಂದರ್ಭದಲ್ಲಿ ಪೂಜಿಸಲೆಂದೇ ಹೂಗಳ ತಂದೆ ಹಾಡುವ ಮೂಲಕ ಪ್ರಧಾನಿ ಮೋದಿಯವರ ಮೆಚ್ಚುಗೆಗೆ ಶಿವಶ್ರೀ ಪಾತ್ರರಾಗಿದ್ದರು.
ತೇಜಸ್ವಿ ಅವರಂತೆ ಶಿವಶ್ರೀ ಅವರು ಹರಿಕಥೆ, ಸೈಕ್ಲಿಂಗ್, ವಾಕಥಾನ್ನಲ್ಲಿ ಆಸಕ್ತಿ ಹೊಂದಿದ್ದಾರೆ ತೇಜಸ್ವಿ ಮತ್ತು ಶಿವಶ್ರೀ ಕೆಲ ವರ್ಷಗಳಿಂದ ಪರಿಚಯ ಹೊಂದಿದ್ದಾರೆ. ಈ ಹಿಂದೆ 2021ರಲ್ಲಿ ಚೆನ್ನೈನಲ್ಲಿ ನಡೆದಿದ್ದ ಸಂಗೀತ ಕಾರ್ಯಕ್ರಮವೊಂದರಲ್ಲಿ ತೇಜಸ್ವಿ ಸೂರ್ಯ ಭಾಗಿಯಾಗಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಶಿವಶ್ರೀಯವರನ್ನು ಸನ್ಮಾನಿಸಿದ್ದರು. ಈ ಫೋಟೋಗಳನ್ನ ಶಿವಶ್ರೀ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.